ಕೋಲ್ಕತ್ತಾ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತನ್ನನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಪ್ರಕರಣದ ಆರೋಪಿ ಸಂಜಯ್ ರಾಯ್ ಶಾಕಿಂಗ್ ಹೇಳಿಕೆ ನೀಡಿದ್ದಾನೆ.
ಇಂದು ಕೋಲ್ಕತಾದ ಸೀಲ್ದಾಹ್ ಕೋರ್ಟ್ ಗೆ ಆರೋಪಿಯನ್ನು ವಿಚಾರಣೆಗೆಂದು ಕರೆತರಲಾಗಿತ್ತು. ಬಳಿಕ ಆತನನ್ನು ಭಾರಿ ಭದ್ರತೆಯೊಂದಿಗೆ ಕೋರ್ಟ್ ನಿಂದ ವಾಪಸ್ ಕರೆದುಕೊಂಡು ಹೋಗುತ್ತಿದ್ದಾಗ ಆತನನ್ನು ಮಾಧ್ಯಮ ಸಿಬ್ಬಂದಿ ಸುತ್ತುವರೆದರು. ಈ ವೇಳೆ ಆರೋಪಿ ಸಂಜಯ್, ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ನನ್ನನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ.
ಮಾಜಿ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ವಿನಾ ಕಾರಣ ನನ್ನನು ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಆತನ ಹೇಳಿಕೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆಯನ್ನು ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ದೇಶಾದ್ಯಂತ ವೈದ್ಯರ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಭಾರಿ ಸುದ್ದಿಗೆ ಗ್ರಾಸವಾಗಿದ್ದ ಈ ಪ್ರಕರಣದಲ್ಲಿ ಕೋಲ್ಕತಾ ಪೊಲೀಸರು ಶಂಕಿತ ಸಂಜಯ್ ರಾಯ್ ನನ್ನು ಬಂಧಿಸಿದ್ದಾರೆ. ಅಲ್ಲದೆ ಇದೇ ಪ್ರಕರಣದಲ್ಲಿ ಕರ್ತವ್ಯ ಲೋಪದಡಿಯಲ್ಲಿ ಆರ್ ಜಿಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಈ ಹಿಂದೆ ತನಿಖಾಧಿಕಾರಿಗಳು ಶಂಕಿತ ವ್ಯಕ್ತಿ ಸಂಜಯ್ ಮಧ್ಯರಾತ್ರಿಯ ನಂತರ ಅಂದರೆ ಅಪರಾಧ ನಡೆದ ಒಂದು ಗಂಟೆಯ ನಂತರ ಆಸ್ಪತ್ರೆಗೆ ಪ್ರವೇಶಿಸಿದ ಸಿಸಿಟಿವಿ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಶಂಕಿತ ವ್ಯಕ್ತಿಯ ಕುತ್ತಿಗೆಗೆ ಬ್ಲೂಟೂತ್ ಇಯರ್‌ಫೋನ್ ಹಾಕಿಕೊಂಡು ಹೊರಗೆ ಬರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳೆಯ ಶವ ಪತ್ತೆಯಾದ ನಂತರ ಪ್ರಾಥಮಿಕ ತನಿಖೆಯಲ್ಲಿ ಅಪರಾಧ ನಡೆದ ಸ್ಥಳದಿಂದ ಬ್ಲೂಟೂತ್ ಇಯರ್‌ಫೋನ್‌ಗಳು ಪತ್ತೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸಂಜಯ್ ರಾಯ್ ಮುಂಜಾನೆ 1.03 ಗಂಟೆಗೆ ಆಸ್ಪತ್ರೆಗೆ ಪ್ರವೇಶಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ.
ಅಂತೆಯೇ ವಿಚಾರಣೆ ವೇಳೆ ಪೊಲೀಸರು ಆತನಿಗೆ ಇದೇ ಸಿಸಿಟಿವಿ ಸಾಕ್ಷ್ಯವನ್ನು ತೋರಿಸಿದ್ದು, ನಂತರ ಸಂಜಯ್ ರಾಯ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕೊಲೆಗೂ ಮುನ್ನ ವೇಶ್ಯಾಗೃಹಗಳಿಗೆ ಹೋಗಿದ್ದ ಆರೋಪಿ
ಇನ್ನು ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ರಾತ್ರಿ 1.03 ಗಂಟೆಗೆ ಆಸ್ಪತ್ರೆ ತಲುಪುವ ಮುನ್ನ ಸಂಜಯ್ ರಾಯ್ ಕೋಲ್ಕತ್ತಾದ ಎರಡು ವೇಶ್ಯಾಗೃಹಗಳಿಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಆಗಸ್ಟ್ 8 ರಂದು ರಾತ್ರಿ ರೆಡ್ ಲೈಟ್ ಏರಿಯಾ ಸೋನಾಗಚಿಗೆ ಹೋಗಿ ಮದ್ಯ ಸೇವಿಸಿ ಎರಡು ವೇಶ್ಯಾಗೃಹಗಳಿಗೆ ಒಂದರ ನಂತರ ಒಂದರಂತೆ ಭೇಟಿ ನೀಡಿದ್ದ.
ನಂತರ ಆತ ಮಧ್ಯರಾತ್ರಿ ಆಸ್ಪತ್ರೆಗೆ ಹೋಗಿದ್ದಾನೆ. ಈ ವೇಳೆ ಆತ ಸಂತ್ರಸ್ಥ ಮಹಿಳೆ ಇದ್ದ ಸೆಮಿನಾರ್ ಹಾಲ್‌ಗೆ ಪ್ರವೇಶಿಸುವುದು ಮತ್ತು ಹೊರಹೋಗುವುದು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಅಲ್ಲಿ ಜೂನಿಯರ್ ವೈದ್ಯರು ಮಲಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಈ ಪ್ರಕರಣವನ್ನು ಕೋಲ್ಕತ್ತಾ ಹೈಕೋರ್ಟ್ CBIಗೆ ವಹಿಸಿದೆ. ಅಲ್ಲದೆ ಪ್ರಕರಣದಲ್ಲಿನ ತನಿಖಾ ವಿಳಂಬದ ಕುರಿತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
Advertisement