ಗುವಾಹಟಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್), ಮತ್ತು ಸ್ಥಳೀಯ ಪೊಲೀಸರು ಸೋಮವಾರ ನಡಸಿದ ಗುಂಡಿನ ದಾಳಿಯ ನಂತರ ಮಣಿಪುರದ ಜಿರಿಬಾಮ್‌ನ ಸಂಘರ್ಷ ಪೀಡಿತ ಪ್ರದೇಶದಿಂದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಇಂಫಾಲದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾನಿರೀಕ್ಷಕ(ಐಜಿಪಿ) ಐ.ಕೆ. ಮುಯಿವಾಹ್ ಅವರು, ಸೋಮವಾರ ಮಧ್ಯಾಹ್ನ 2:30 ರಿಂದ 3 ಗಂಟೆಯ ಸುಮಾರಿಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಜಕುರಾಧೋರ್‌ನಲ್ಲಿರುವ ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಹತ್ತಿರದ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿದರು ಎಂದು ಹೇಳಿದ್ದಾರೆ.
“ಶಸ್ತ್ರಸಜ್ಜಿತ ಉಗ್ರರು ಆರ್‌ಪಿಜಿಗಳು ಮತ್ತು ಎಕೆ, ಐಎನ್‌ಎಸ್‌ಎಎಸ್ ಮತ್ತು ಎಸ್‌ಎಲ್‌ಆರ್ ರೈಫಲ್‌ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರು. ದಾಳಿಯಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅಸ್ಸಾಂಗೆ ಸ್ಥಳಾಂತರಿಸಲಾಗಿದೆ ಎಂದು ಮುಯಿವಾಹ್ ಅವರು ತಿಳಿಸಿದ್ದಾರೆ.
ಸಿಆರ್‌ಪಿಎಫ್, ಉಗ್ರರಿಗೆ ತಕ್ಕ ಪ್ರತಿಕ್ರಿಯೆ ನೀಡಿದ್ದು, ಸುಮಾರು 45 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಗುಂಡಿನ ದಾಳಿಯಲ್ಲಿ ಸುಮಾರು 10 ಉಗ್ರರು ಹತರಾಗಿದ್ದಾರೆ. ಇಬ್ಬರು ಹಿರಿಯ(ವಯಸ್ಸಾದ) ವ್ಯಕ್ತಿಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ, ಮೂವರು ಮಹಿಳೆಯರು ಮತ್ತು ಮೂವರು ಅಪ್ರಾಪ್ತ ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
"ನಾವು ಯಾವಾಗಲೂ ನಮ್ಮ ಸಶಸ್ತ್ರ ಪಡೆಗಳ ಗುಂಡಿನ ದಾಳಿಯನ್ನು ಮಿತಿಗೊಳಿಸಲು ಸೂಚಿಸುತ್ತೇವೆ ಮತ್ತು ಇದು ಪ್ರಮಾಣಿತ ಅಭ್ಯಾಸವಾಗಿದೆ". ಆದರೆ ಅವರು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿದಾಗ ಪ್ರತೀಕಾರದ ಅಗತ್ಯವಿರುತ್ತದೆ ಎಂದು ಮುಯಿವಾಹ್ ತಿಳಿಸಿದ್ದಾರೆ.
Advertisement