ಹೈದರಾಬಾದ್: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಗೂಡ್ಸ್ ರೈಲು ಹಳಿತಪ್ಪಿದ್ದು, 20 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ (SCR) ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ರಾಘವಪುರಂ ಮತ್ತು ರಾಮಗುಂಡಂ ನಡುವೆ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಗೂಡ್ಸ್ ರೈಲಿನ 11 ಬೋಗಿಗಳು ಹಳಿತಪ್ಪಿವೆ.
ಗೂಡ್ಸ್ ರೈಲು ಹಳಿತಪ್ಪಿದ ಕಾರಣ, 20 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ, ನಾಲ್ಕು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು 10 ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಎರಡು ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ ಎಂದು SCR ವಲಯದ ಪ್ರಕಟಣೆ ತಿಳಿಸಿದೆ.
ಗೂಡ್ಸ್ ರೈಲು ಹಳಿತಪ್ಪಿದ ಪರಿಣಾಮ ಮೂರು ರೈಲು ಹಳಿಗಳಿಗೆ ಹಾನಿಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ರೈಲ್ವೇ ಸಿಬ್ಬಂದಿ ತೆರವು ಕಾರ್ಯ ಆರಂಭಿಸಿದ್ದಾರೆ. ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕಾಗಿ ನಾಗ್ಪುರಕ್ಕೆ ಬಂದಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿ ಹಳಿಗಳ ಮರುಸ್ಥಾಪನೆ ಕಾರ್ಯವನ್ನು ತ್ವರಿತಗೊಳಿಸುವಂತೆ ಸೂಚಿಸಿದರು.
Advertisement