ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ಮುಕ್ತಾಯಗೊಂಡಿದ್ದು, ಸಂಜೆ 5 ಗಂಟೆಯವರೆಗೆ ಶೇ. 64.86 ರಷ್ಟು ಮತದಾನವಾಗಿದೆ.
ಇಂದು 43 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಲೋಹರ್ಡಗಾದಲ್ಲಿ ಅತಿ ಹೆಚ್ಚು ಅಂದರೆ ಶೇ. 73.21ರಷ್ಟು ಮತದಾನವಾಗಿದ್ದರೆ, ಹಜಾರಿಬಾಗ್‌ನಲ್ಲಿ ಅತಿ ಕಡಿಮೆ ಅಂದರೆ ಶೇ. 59.13 ರಷ್ಟು ಮತದಾನವಾಗಿದೆ.
ಪ್ರಮುಖ ರಾಜಕೀಯ ನಾಯಕರಾದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್, ಮಾಜಿ ಸಂಸದೆ ಗೀತಾ ಕೋರಾ ಸೇರಿದಂತೆ ಒಟ್ಟು 683 ಅಭ್ಯರ್ಥಿಗಳು ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.
ಬಿಜೆಪಿ ಮತ್ತು ಇಂಡಿಯಾ ಬ್ಲಾಕ್ ಎರಡೂ ಹೈ-ಪ್ರೊಫೈಲ್ ಅಬ್ಬರದ ಪ್ರಚಾರ ನಡೆಸಿದವು. ಬಿಜೆಪಿ ತನ್ನ 'ರೋಟಿ, ಬೇಟಿ, ಮಾಟಿ' ಅಜೆಂಡಾವನ್ನು ಒತ್ತಿಹೇಳಿತ್ತು ಮತ್ತು ಇಂಡಿಯಾ ಬ್ಲಾಕ್ ಕಲ್ಯಾಣ ಸಾಧನೆಗಳನ್ನು ಎತ್ತಿ ತೋರಿಸುತ್ತ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಟೀಕಿಸಿತ್ತು.
ಜಾರ್ಖಂಡ್ ನಲ್ಲಿ ಎರಡನೇ ಹಂತದ ಮತದಾನವು ನವೆಂಬರ್ 20 ರಂದು ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗುತ್ತದೆ.
ಪ್ರಸ್ತುತ ಬಹುಮತ ಹೊಂದಿರುವ ಜೆಎಂಎಂ ನೇತೃತ್ವದ ಸರ್ಕಾರವು ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಅಧಿಕಾರಕ್ಕೇರುತ್ತದೆಯೇ ಎಂಬುದನ್ನು ಚುನಾವಣಾ ಫಲಿತಾಂಶ ನಿರ್ಧರಿಸುತ್ತದೆ.
Advertisement