ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈವರೆಗೂ ಶೇ.46.25ರಷ್ಟು ಮತದಾನವಾಗಿದೆ.
ಒಟ್ಟು 81 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಉಳಿದ 38 ಕ್ಷೇತ್ರಗಳಿಗೆ ನ.20ರಂದು ಮತದಾನ ನಡೆಯಲಿದೆ.
ಮೊದಲ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಚಂಪೈ ಸೇರಿ 683 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 15 ಜಿಲ್ಲೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 5 ಕ್ಕೆ ಮುಕ್ತಾಯವಾಗಲಿದೆ.
ಜಾರ್ಖಂಡ್ ಚುನಾವಣೆಯ ಮೊದಲ ಹಂತದಲ್ಲಿ, ಚಂಪೈ ಸೊರೆನ್, ಮಹುವಾ ಮಜಿ, ಗೀತಾ ಕೋಡಾ, ಅಜೋಯ್ ಕುಮಾರ್, ಬನ್ನಾ ಗುಪ್ತಾ ಮತ್ತು ಸುಖರಾಮ್ ಓರಾನ್. ಮೊದಲ ಹಂತದ ಮತದಾನದಲ್ಲಿ ಜೆಮ್‌ಶೆಡ್‌ಪುರ ಪಶ್ಚಿಮದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಜಗನ್ನಾಥಪುರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳು ಅಂದರೆ, 8 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣೆಗಾಗಿ ಜಾರ್ಖಂಡ್ ರಾಜ್ಯಾದ್ಯಂತ ಒಟ್ಟು 15,344 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 225 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಲಾಗಿದೆ. ಭದ್ರತಾ ಸುವ್ಯವಸ್ಥೆ ಕಾಪಾಡಲು 200 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಮೊದಲ ಹಂತದಲ್ಲಿ 1 ಕೋಟಿ 37 ಲಕ್ಷ ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಜೆಎಂಎಂ ಪಕ್ಷದಿಂದ ಸಿಎಂ ಪಟ್ಟಕ್ಕೇರಿದ್ದ ಚಂಪೈ ಸೊರೆನ್ ಮುನಿಸಿಕೊಂಡು ಪಕ್ಷ ತೊರೆದು ಬಿಜೆಪಿ ಸೇರಿ ಸರೈಕಲಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.
ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟವು ಮರಳಿ ಅಧಿಕಾರಕ್ಕೆ ಬರುವ ಯತ್ನದಲ್ಲಿದ್ದರೆ, ಬಿಜೆಪಿಯು ‘ಇಂಡಿಯಾ’ಕ್ಕೆ ತೀವ್ರ ಸ್ಪರ್ಧೆ ಒಡ್ಡಿದೆ.
ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಭಾಗಿಯಾಗಿ ಮತದಾನದ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಜನತೆಗೆ ಕರೆ ನೀಡಿದ್ದಾರೆ.
Advertisement