ಜೈಪುರ: ರಾಜಸ್ಥಾನದ ತೊಂಕ್ ಜಿಲ್ಲೆಯಲ್ಲಿ ಬುಧವಾರ ನಡೆದ ಉಪ ಚುನಾವಣೆ ವೇಳೆ ಚುನಾವಣಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಅವರನ್ನು ಗುರುವಾರ ಭಾರಿ ಹಿಂಸಾಚಾರದ ನಡುವೆ ಬಂಧಿಸಲಾಗಿದೆ.
ಹಿಂಸಾಚಾರದ ವೇಳೆ ಕನಿಷ್ಠ 60 ಜನರು ಗಾಯಗೊಂಡಿದ್ದಾರೆ. ಮೀನಾ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ, ಅವರ ಬೆಂಬಲಿಗರು ಹಿಂಸಾಚಾರ ನಡೆಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಪೊಲೀಸರು ತಡೆದರೂ ಚುನಾವಣಾ ಪ್ರಕ್ರಿಯೆಯನ್ನು ಪರಿಶೀಲಿಸುತ್ತಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅಮಿತ್ ಚೌಧರಿ ಅವರ ಕಾಲರ್ ಹಿಡಿದು ಅವರಿಗೆ ಕಪಾಳ ಮೋಕ್ಷ ಮಾಡುತ್ತಿರುವ ವಿಡಿಯೋದಲ್ಲಿ ಸೆರೆಯಾಗಿತ್ತು. ಮೀನಾ ಪೊಲೀಸರನ್ನು ನಿಂದಿಸುವ ಧ್ವನಿ ಕೂಡಾ ಕೇಳಿಸುತಿತ್ತು. ಮೀನಾ ಅವರನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೂ ಕೆಲಸವನ್ನು ಬಹಿಷ್ಕರಿಸುವುದಾಗಿ ರಾಜಸ್ಥಾನ ಆಡಳಿತ ಸೇವಾ ಅಧಿಕಾರಿಗಳ ಸಂಘದ ಮುಖ್ಯಸ್ಥ ಮಹಾವೀರ್ ಖರಾಡಿ ಎಚ್ಚರಿಕೆ ನೀಡಿದ್ದರು.
ಈಗ ಮೀನಾ ಬಂಧನದ ನಂತರ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಮತ್ತು ಪೊಲೀಸರಿಗೆ ಮಹಾವೀರ್ ಖರಾಡಿ ಧನ್ಯವಾದ ಸಲ್ಲಿಸಿದ್ದಾರೆ. ಅಧಿಕಾರಿಗಳಿಗೆ ಸುರಕ್ಷತೆ ಖಾತ್ರಿಪಡಿಸುವಲ್ಲಿ ಇದು ಅಗತ್ಯವಾದ ಕ್ರಮವಾಗಿದೆ. ನಾವು ಒಂದು ದಿನ ಕೆಲಸ ಸ್ಥಗಿತಕ್ಕೆ ಕರೆ ನೀಡಿದ್ದೇವು. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಮುಖ್ಯಮಂತ್ರಿ ಜೊತೆಗೆ ಮಾತನಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನಾ ಮಾತನಾಡಿದ ಐಜಿ ಓಂ ಪ್ರಕಾಶ್, ಸ್ಥಳದಿಂದ ತಪ್ಪಿಸಿಕೊಂಡಿದ್ದ ಮೀನಾ ಅವರನ್ನು ಹುಡುಕಾಡಿ ಬಂಧಿಸಲಾಗಿದೆ. ಹಿಂಸಾಚಾರದಲ್ಲಿ 60 ನಾಗರಿಕರು ಹಾಗೂ 8 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
Advertisement