ಜಮುಯಿ: ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಬುಡಕಟ್ಟು ಸಮುದಾಯಗಳ ಕೊಡುಗೆಯೂ ಇದೆ. ಆದರೆ ಇದನ್ನು ಗುರುತಿಸುವಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ವಿಫಲವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಟೀಕಿಸಿದ್ದಾರೆ.
ಕಾಂಗ್ರೆಸ್ ಅಥವಾ ಯಾವುದೇ ವ್ಯಕ್ತಿಯನ್ನು ಹೆಸರಿಸದೆ ಮೋದಿ, "ಎಲ್ಲಾ ಕ್ರೆಡಿಟ್ ಅನ್ನು ಕೇವಲ ಒಂದು ಪಕ್ಷ ಮತ್ತು ಒಂದು ಕುಟುಂಬಕ್ಕೆ ನೀಡುವ ಪ್ರಯತ್ನವಾಗಿದೆ" ಎಂದು ವಾಗ್ದಾಳಿ ನಡೆಸಿದರು.
ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಇಂದು ಆಯೋಜಿಸಲಾಗಿದ್ದ ಜಂಜಾಟಿಯ ಗೌರವ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಒಂದು ಕುಟುಂಬದಿಂದಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೆ ಬಿರ್ಸಾ ಮುಂಡಾ ‘ಉಲ್ಗುಲನ್’ ಚಳವಳಿಯನ್ನು ಏಕೆ ಆರಂಭಿಸಿದರು’ ಎಂದು ಪ್ರಶ್ನಿಸಿದರು.
ಹಿಂದಿನ ಆಡಳಿತದಲ್ಲಿ ಭಾರತದ ಬುಡಕಟ್ಟು ಸಮುದಾಯಕ್ಕೆ ಸೂಕ್ತ ಮನ್ನಣೆ ದೊರೆತಿಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಭಾರತದ ಬುಡಕಟ್ಟು ಸಮುದಾಯಕ್ಕೆ ಈ ಹಿಂದೆ ನ್ಯಾಯ ಸಿಗಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಅನೇಕ ಬುಡಕಟ್ಟು ನಾಯಕರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಮೋದಿ ಹೇಳಿದರು.
ಬುಡಕಟ್ಟು ಜನಾಂಗದ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರು ಪ್ರಕೃತಿಯೊಂದಿಗೆ ಆಳವಾದ ನಂಟು ಹೊಂದಿದ್ದಾರೆ ಮತ್ತು ಅವರ ಪರಿಸರ ಸ್ನೇಹಿ ಜೀವನಶೈಲಿಗಾಗಿ ನಾನು ಅವರನ್ನು "ಪೂಜಿಸುತ್ತೇನೆ" ಎಂದು ಹೇಳಿದರು.
Advertisement