ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಜಾರ್ಖಂಡ್‌ನಿಂದ ವಾಪಸಾಗುತ್ತಿದ್ದ ನವವಿವಾಹಿತರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಡೆಹ್ರಾಡೂನ್-ನೈನಿತಾಲ್ ಹೆದ್ದಾರಿಯಲ್ಲಿ ಧಮ್‌ಪುರದ ಅಗ್ನಿಶಾಮಕ ಠಾಣೆ ಬಳಿ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ನವವಿವಾಹಿತ ಜೋಡಿ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಟೆಂಪೋಗೆ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ನಂತರ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಅವರು ತಿಳಿಸಿದ್ದಾರೆ.
ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಅದರ ಚಾಲಕ ಅಜಬ್ ಸಿಂಗ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಕಾರಿನಲ್ಲಿ ಚಲಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement