ಫಿರೋಜಾಬಾದ್: ನಿದ್ರೆಯ ಮಂಪರಿನಲ್ಲಿದ್ದ ಟೆಂಪೋ ಚಾಲಕನೊಬ್ಬ ನಿಂತಿದ್ದ ಕ್ಯಾಂಟರ್'ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿ, 24 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ನಾಸಿರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಥುರಾದಿಂದ ಲಖನೌಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್‌ನಲ್ಲಿ 30 ಮಂದಿ ಪ್ರಯಾಣಿಕರಿದ್ದರು. ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಥಾನಾ ನಾಸಿರ್‌ಪುರ ಬಳಿ ನಿಂತಿದ್ದ ವಾಹನಕ್ಕೆ ಟೆಂಪೋ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಾಯಾಳುಗಳನ್ನು ರಕ್ಷಣೆ ಮಾಡಿ, ಕೂಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ತನಿಖೆ ವೇಳೆ ಚಾಲಕ ನಿದ್ರೆಗೆ ಜಾರಿದ್ದು, ಈ ವೇಳೆ ಟೆಂಪೋ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಿಂತಿದ್ದ ಕ್ಯಾಂಟರ್'ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ನೀತು (42), ಇವರ ಮಗಳು ಮಗಳು ಲುವಶಿಖಾ (13), ಪುತ್ರರಾದ ನೈತಿಕ್ (15) ಮತ್ತು ಸಜ್ಜನ್ ಹಾಗೂ ಮತ್ತಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಗಾಯಾಳುಗಳನ್ನು ಗೀತಾ (42), ಹೃತಿಕ್ (12), ಕಾರ್ತಿಕ್ (9), ಪ್ರಾಂಶು (13), ಸಂಜೀವನ್ (43), ಸುಶೀಲ್ ಕುಮಾರ್ (30), ಶಶಿದೇವಿ (44), ಅವರ ಮೊಮ್ಮಗಳು ಚಮ್ಚಮ್ (4), ಸಾವಿತ್ರಿ ದೇವಿ (41), ಅವರ ಮೊಮ್ಮಗಳು ಆರೋಹಿ (1.5), ರಿಯಾ (16), ಪೂನಂ (29), ಫೂಲ್ಮತಿ (40), ಸಾರಿಕಾ (13) ಮತ್ತು ರೂಬಿ (29) ಎಂದು ಗುರ್ತಿಸಲಾಗಿದ್ದು, ಎಲ್ಲರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮೃತರ ಶವಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement