ಅಹಮದಾಬಾದ್: ವಿವಾಹಿತ ಮಹಿಳೆಯೊಬ್ಬರು ತಮ್ಮ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಹಾಕಿದ ಆರೋಪ ಮಾಡಿದ ಬೆನ್ನಲ್ಲೇ ಗುಜರಾತ್‌ನ ಆನಂದ್ ಮುನ್ಸಿಪಾಲಿಟಿಯ ವಾರ್ಡ್ ನಂ. 6ರ ಬಿಜೆಪಿ ಕೌನ್ಸಿಲರ್ ದೀಪು ಗೋರ್ಧನ್‌ಭಾಯ್ ಪ್ರಜಾಪತಿ ತಲೆಮರೆಸಿಕೊಂಡಿದ್ದಾರೆ. ಮತದಾನ ಚೀಟಿ ನೀಡುವ ನೆಪದಲ್ಲಿ ಆರು ತಿಂಗಳ ಹಿಂದೆ ಪ್ರಜಾಪತಿ ತನ್ನ ಮೊಬೈಲ್ ನಂಬರ್ ಪಡೆದುಕೊಂಡು ನಂತರ ನನ್ನನ್ನು ಬಳಸಿಕೊಂಡರು. ಇದಾದ ಬಳಿಕ ಫೋನ್ ಸಂಭಾಷಣೆಗಳ ರೆಕಾರ್ಡಿಂಗ್‌ನೊಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆನಂದ್ ಟೌನ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡುತ್ತಿದ್ದಂತೆ ಪ್ರಜಾಪತಿ ನಾಪತ್ತೆಯಾಗಿದ್ದು, ಪೊಲೀಸರು ಆತನ ಸಹಚರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅವರಲ್ಲಿ ಕೆಲವರು ಸಂತ್ರಸ್ತೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪ ಕೇಳಿಬಂದ ಕೂಡಲೇ ಪ್ರಜಾಪತಿ ಅವರನ್ನು ಬಿಜೆಪಿ ಅಮಾನತು ಮಾಡಿದೆ.
ಬಿಜೆಪಿ ಕೌನ್ಸಿಲರ್ ದೀಪುಭಾಯ್ ಗೋರ್ಧನಭಾಯ್ ಪ್ರಜಾಪತಿ ತನ್ನ ವೈಯಕ್ತಿಕ ಸಂಪರ್ಕ ವಿವರಗಳನ್ನು ಪಡೆಯಲು ಮತದಾನ ಚೀಟಿ ವಿಷಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆನಂದ್ ನಗರದ ವಿವಾಹಿತ ಮಹಿಳೆ ಆರೋಪಿಸಿದ್ದಾರೆ. 2024ರ ಜೂನ್ 6ರಂದು ಮಧ್ಯಾಹ್ನ ಈ ಘಟನೆ ನಡೆದಿದೆ. ತನ್ನ ಪತಿ ಕೆಲಸಕ್ಕೆ ಹೋದ ಬಳಿಕ ಸಂತ್ರಸ್ತೆ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ಆನಂದ್ ಪುರಸಭೆಯ ವಾರ್ಡ್ ನಂ.6 ಪ್ರತಿನಿಧಿಸುವ ಪ್ರಜಾಪತಿ ಅವರು ಮತದಾನದ ರಸೀದಿ ಕುರಿತಂತೆ ವಿಚಾರಿಸುವ ನೆಪದಲ್ಲಿ ಆಕೆಯ ಮನೆಗೆ ಭೇಟಿ ನೀಡಿದ್ದರು.
ಈ ವೇಳೆ ತಮ್ಮ ಬಳಿ ಮತದಾನದ ರಸೀದಿ ಇಲ್ಲ ಎಂದು ಹೇಳಿದಾಗ ಪ್ರಜಾಪತಿ ಸಂತ್ರಸ್ತೆಯ ಮೊಬೈಲ್ ಸಂಖ್ಯೆಯನ್ನು ಕೇಳಿ ಪಡೆದುಕೊಂಡಿದ್ದಾನೆ. ನಂತರ ವಾಟ್ಸಾಪ್ ಮೂಲಕ ರಸೀದಿಯನ್ನು ಮಹಿಳೆಯ ಮೊಬೈಲ್ ಗೆ ಕಳುಹಿಸಿದ್ದಾನೆ. ನಂತರ ಮಹಿಳೆಗೆ ಕರೆ ಮಾಡಿ ಮಾತನಾಡಲು ಶುರು ಮಾಡಿದ್ದಾನೆ. ಪ್ರಜಾಪತಿ ಮೊದಲು ತನಗೆ ಕರೆ ಮಾಡಿ, ಅನುಚಿತವಾಗಿ ಮಾತನಾಡಿದ್ದು ತನ್ನ ಪತಿಯ ವೀಡಿಯೊ ಇರುವುದಾಗಿ ಹೇಳಿಕೊಂಡಿದ್ದಾನೆ. ತಾನು ಹೇಳಿದಂತೆ ಕೇಳದಿದ್ದರೆ ನನ್ನ ಪತಿಯೊಂದಿಗೆ ತಮ್ಮ ಫೋನ್ ಸಂಭಾಷಣೆಗಳನ್ನು ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು ಅಲ್ಲದೆ ರಾತ್ರಿ ಮನೆಗೆ ಬಂದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
2024ರ ನವೆಂಬರ್ 16ರಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಪತಿ ಮತ್ತು ಮಕ್ಕಳು ಐಸ್ ಕ್ರೀಮ್ ಖರೀದಿಸಲು ಹೊರ ಹೋದ ಬಳಿಕ ಮನೆಗೆ ನುಗ್ಗಿದ ಪ್ರಜಾಪತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇನ್ನು ಹೊರ ಹೋಗಿದ್ದ ಪತಿ ಹಿಂತಿರುಗಿದ್ದು ಪ್ರಜಾಪತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಗಲಾಟೆ ಆಗಿ ನೆರೆಹೊರೆಯವರು ಸೇರಿದ್ದರು. ನಂತರ ಅಲ್ಲಿಗೆ ಬಂದ ಪ್ರಜಾಪತಿ ಸಹೋದರರು ಮತ್ತು ಸಹಚರರು ಕೋಲು ಮತ್ತು ಪೈಪ್‌ಗಳಿಂದ ಸಂತ್ರಸ್ತೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಇದೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜಗಳದ ವೇಳೆ ಪ್ರಜಾಪತಿಗೆ ಸಂತ್ರಸ್ತೆಯ ಕುಟುಂಬ ಮತ್ತು ನೆರೆಹೊರೆಯವರು ಥಳಿಸಿದ್ದರು. ಬಳಿಕ ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ ಪ್ರಜಾಪತಿ ತಲೆಮರೆಸಿಕೊಂಡಿದ್ದಾನೆ. ನಾವು ಸಂತ್ರಸ್ತೆಯ ದೂರನ್ನು ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದೇವೆ. ಪ್ರಮುಖ ಆರೋಪಿ ದೀಪು ಪ್ರಜಾಪತಿ ತಲೆಮರೆಸಿಕೊಂಡಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದ ಆತನ ಇಬ್ಬರು ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ವಿ.ಡಿ. ಆನಂದ್ ತಿಳಿಸಿದ್ದಾರೆ.
Advertisement