ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಡಿಸೆಂಬರ್ 6 ರಂದು ದೆಹಲಿಯತ್ತ ಮೆರವಣಿಗೆ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೋಮವಾರ ಘೋಷಿಸಿವೆ.
ಇಂದು ಚಂಡೀಗಢದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರತಿಭಟನಾ ನಿರತ ರೈತರು ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಡಿಸೆಂಬರ್ 6 ರಂದು ಎಸ್‌ಕೆಎಂ(ರಾಜಕೀಯೇತರ) ಮತ್ತು ಕೆಎಂಎಂ ನೇತೃತ್ವದಲ್ಲಿ 'ದೆಹಲಿ ಚಲೋ' ನಡೆಸಲು ನಿರ್ಧರಿಸಲಾಗಿದೆ.
ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೆಎಂಎಂ ನಾಯಕ ಸರ್ವಾನ್ ಸಿಂಗ್ ಪಂಧೇರ್ ಅವರು, ಸುದೀರ್ಘ ಕಾಯುವಿಕೆಯ ನಂತರ ದೆಹಲಿಯತ್ತ ತೆರಳಲು ನಿರ್ಧರಿಸಿದ್ದೇವೆ. ನಾವು ಡಿಸೆಂಬರ್ 6 ರಂದು ದೆಹಲಿಯತ್ತ ಸಾಗುತ್ತೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ರೈತರ ಬೇಡಿಕೆಗಳ ಕುರಿತು ಚರ್ಚಿಸಲು ರೈತರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಪಂಧೇರ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.
"ನಮಗೆ ಬೇರೆ ಆಯ್ಕೆಯಿಲ್ಲ. ನಾವು ಕಳೆದ ಒಂಬತ್ತು ತಿಂಗಳಿಂದ ಶಾಂತಿಯುತವಾಗಿ ಕಾಯುತ್ತಿದ್ದೆವು. ಆದರೆ ಈಗ ನಾವು ದೆಹಲಿ ಚಲೋ ನಡೆಸುತ್ತೇವೆ" ರೈತರು ಶಂಭು ಗಡಿಯಿಂದ ಬ್ಯಾಚ್‌ಗಳಲ್ಲಿ ರಾಷ್ಟ್ರ ರಾಜಧಾನಿಯತ್ತ ಸಾಗುತ್ತಾರೆ ಎಂದು ಅವರು ತಿಳಿಸಿದ್ದಾರೆ.
Advertisement