ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಒಂದು ದಿನ ಬಾಕಿಯಿರುವಂತೆಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತದಾರರಿಗೆ ಹಣ ಹಂಚಿದ ಆರೋಪ ಕೇಳಿಬಂದಿದೆ. ಪಾಲ್ಗರ್ ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರ ಮತದಾರರಿಗೆ ತಾವ್ಡೆ ಹಣ ಹಂಚಿದ್ದಾರೆ ಎಂದು ಬಹುಜನ ವಿಕಾಸ್ ಆಘಾಡಿ ನಾಯಕ ಹಿತೇಂದ್ರ ಠಾಕೂರ್ ಮಂಗಳವಾರ ಹೇಳಿದ್ದಾರೆ.
ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಪ್ರಚಾರದ ತಂತ್ರವಲ್ಲದೇ ಮತ್ತೇನೂ ಅಲ್ಲ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮಹಾ ವಿಕಾಸ್ ಆಘಾಡಿ ಈ ರೀತಿಯ ಆರೋಪ ಮಾಡುತ್ತಿದೆ ಎಂದು ತಾವ್ಡೆ ಹೇಳಿದ್ದಾರೆ. ತಾವ್ಡೆ ಮತ್ತು ಬಹುಜನ ವಿಕಾಸ್ ಆಘಾಡಿ ನಾಯಕರು, ಕಾರ್ಯಕರ್ತರ ನಡುವಿನ ಆರೋಪ, ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 228 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆಗೆ ನಾಳೆ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, ಮತದಾರರಿಗೆ 5 ಕೋಟಿ ಹಂಚಲು ವಿನೋದ್ ತಾವ್ಡೆ ಹೋಟೆಲ್ ಗೆ ಬರಲಿದ್ದಾರೆ ಎಂದು ಕೆಲ ಬಿಜೆಪಿ ನಾಯಕರು ಮಾಹಿತಿ ನೀಡಿದರು. ತಾವ್ಡೆಯಂತಹ ರಾಷ್ಟ್ರೀಯ ನಾಯಕರು ಈ ರೀತಿಯ ಕೆಲಸ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ಆದರೆ ಅವರನ್ನು ಇಲ್ಲಿ ನೋಡಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಹಾಗೂ ಬಿಜೆಪಿಯನ್ನು ಒತ್ತಾಯಿಸುತ್ತೇನೆ ಎಂದರು.
ಹೋಟೆಲ್ ನಲ್ಲಿ ತಾವ್ಡೆ ಇರುವುದು ಸಿಸಿಟಿವಿಯಲ್ಲಿ ದಾಖಲೆಯಾಗಿದೆ. ತಾವ್ಡೆ ಮತ್ತು ಬಿಜೆಪಿ ಜೊತೆ ಹೊಟೇಲ್ ಆಡಳಿತ ಶಾಮೀಲಾಗಿರುವಂತಿದೆ. ನಮ್ಮ ಮನವಿ ನಂತರ ಸಿಸಿಟಿವಿಯನ್ನು ಸಕ್ರಿಯಗೊಳಿಸಿದರು. ತಾವ್ಡೆ ಬಹಳ ಚಾಕಚಕ್ಯತೆಯಿಂದ ಮತದಾರರಿಗೆ ಹಣ ಹಂಚುತ್ತಿದ್ದರು ಎಂದು ಠಾಕೂರ್ ಹೇಳಿದರು. ತಾವ್ಡೆ ಮೂರು ಗಂಟೆಗಳ ಕಾಲ ಹೋಟೆಲ್‌ನಲ್ಲಿಯೇ ಇದ್ದರು ಆದರೆ ಬಿವಿಎ ಕಾರ್ಯಕರ್ತರು ಹಿಂದೆ ಸರಿಯಲು ನಿರಾಕರಿಸಿದರು.
5 ಕೋಟಿ ರೂ. ಹಣ ಹಂಚಲಾಗಿದೆ ಎಂಬ ಬಿವಿಎ ಮುಖಂಡರ ಹೇಳಿಕೆಗಳ ನಡುವೆ ಹೋಟೆಲ್ ಕೊಠಡಿಗಳಿಂದ 9 .93 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಣ ಹಂಚಿಕೆ ನಡೆದಿದೆ ಎನ್ನಲಾದ ಹೋಟೆಲ್‌ಗೆ ಸಂಬಂಧಿಸಿದ ಘಟನೆಗಳಿಗೆ ಸಂಬಂಧಿಸಿದಂತೆ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಶಿವಸೇನೆ ನಾಯಕ ಸಂಜಯ್ ರಾವುತ್, "ಬಿಜೆಪಿಯ ಯೋಜನೆ ಕೊನೆಗೊಂಡಿದೆ. ಚುನಾವಣಾ ಆಯೋಗ ಮಾಡಬೇಕಾದುದನ್ನು ಠಾಕೂರ್ ಮಾಡಿದ್ದಾರೆ. ಚುನಾವಣಾ ಅಧಿಕಾರಿಗಳು ನಮ್ಮ ಬ್ಯಾಗ್ ಗಳನ್ನು ಪರಿಶೀಲಿಸುತ್ತಾರೆ ಆದರೆ, ಬಿಜೆಪಿಯ ಇಂತಹ ಯಾವುದೇ ನಾಯಕರನ್ನು ಪರಿಶೀಲಿಸುವುದಿಲ್ಲ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ ಈ ಆರೋಪವನ್ನು ತಳ್ಳಿಹಾಕಿದ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್, ಮಹಾ ವಿಕಾಸ್ ಆಘಾಡಿ ಚುನಾವಣೆಯಲ್ಲಿ ಈಗಾಗಲೇ ಸೋತಿದೆ. ಅವರು ಈ ಚುನಾವಣೆಯಲ್ಲಿ ಸೋಲಲಿದ್ದಾರೆ. ಅದಕ್ಕಾಗಿಯೇ ಅವರು ನಮ್ಮ ವಿರುದ್ಧ ಇಂತಹ ಅಸಂಬದ್ಧ ಆರೋಪಗಳನ್ನು ಮಾಡುತ್ತಿದ್ದಾರೆ, ಠಾಕೂರ್ ಮಾಡುತ್ತಿರುವುದು ಪ್ರಚಾರವಲ್ಲದೇ ಮತ್ತೇನಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಚುನಾವಣಾ ಆಯೋಗದ ನಿರ್ದೇಶನದಂತೆ ಪೊಲೀಸರು ವಿನೋದ್ ತಾವ್ಡೆ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ತಿಳಿದುಬಂದಿದೆ.
Advertisement