ನವದೆಹಲಿ: ಮಹಾರಾಷ್ಟ್ರದಲ್ಲಿ ಮತದಾರರಿಗೆ ಐದು ಕೋಟಿ ರೂಪಾಯಿ ಹಂಚಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ವಿನೋದ್ ತಾವ್ಡೆ ಅವರು, ತಮ್ಮ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಕ್ಷಮೆಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 19 ರಂದು ತಾವ್ಡೆ ಅವರು ಇದ್ದ ಮುಂಬೈ ಉಪನಗರದಲ್ಲಿರುವ ಹೋಟೆಲ್ ನುಗ್ಗಿದ್ದ ಬಹುಜನ ವಿಕಾಸ್ ಅಘಾಡಿ ಪಕ್ಷದ ಕಾರ್ಯಕರ್ತರು, ಬಿಜೆಪಿ ನಾಯಕ ಮತದಾರರನ್ನು ಓಲೈಸಲು 5 ಕೋಟಿ ರೂಪಾಯಿ ಹಂಚಿದ್ದಾರೆ ಎಂದು ಆರೋಪಿಸಿದ್ದರು.
ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಾವ್ಡೆ ಅವರು, ತಾವು ನಿರಪರಾಧಿ ಎಂದು ಹೇಳಿದ್ದು, ಚುನಾವಣಾ ಆಯೋಗ ಮತ್ತು ಪೊಲೀಸರ ತನಿಖೆಯಲ್ಲಿ ಆಪಾದಿತ 50 ಕೋಟಿ ರೂ. ಹಣ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಕೇವಲ ಸುಳ್ಳುಗಳನ್ನು ಹರಡುತ್ತದೆ ಮತ್ತು ಈ ಘಟನೆಯು ಪಕ್ಷದ ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿದೆ. ನನ್ನನ್ನು ಮತ್ತು ನನ್ನ ಪಕ್ಷದ ಇಮೇಜ್ ಹಾಳು ಮಾಡಲು ಯತ್ನಿಸಿದ್ದಾರೆ" ಎಂದು ತಾವ್ಡೆ ತಿಳಿಸಿದ್ದಾರೆ.
ರಾಜ್ಯದಲ್ಲಿ ನವೆಂಬರ್ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವ ಬೀರಲು ಬಿಜೆಪಿ ಹಣದ ಬಲವನ್ನು ಬಳಸುತ್ತಿದೆ ಎಂದು ಮಲ್ಲಿಕಾರ್ಜು ಖರ್ಗೆ, ರಾಹುಲ್ ಗಾಂಧಿ ಹಾಗೂ ಪಕ್ಷದ ವಕ್ತಾರೆ ಸುಪ್ರಿಯಾ ಶ್ರಿನೇಟ್ ಅವರು ವಾಗ್ದಾಳಿ ನಡೆಸಿದ್ದರು.
ಈ ಮೂವರು ಕಾಂಗ್ರೆಸ್ ನಾಯಕರಿಗೆ ತಾವ್ಡೆ ಅವರು ಲೀಗಲ್ ನೋಟಿಸ್ ಕಳುಹಿಸಿದ್ದು, "ಸಂಪೂರ್ಣ ಸುಳ್ಳು ಕಥೆ ಕಟ್ಟಲಾಗಿದೆ" ಎಂದು ಹೇಳಿದ್ದಾರೆ.
"ನೀವೆಲ್ಲರೂ ಉದ್ದೇಶಪೂರ್ವಕವಾಗಿ, ಚೇಷ್ಟೆಯಿಂದ ನಮ್ಮ ಕಕ್ಷಿದಾರನ ಪ್ರತಿಷ್ಠೆಗೆ ಹಾನಿ ಮಾಡುವ ಏಕೈಕ ಉದ್ದೇಶದಿಂದ, ಉದ್ದೇಶಪೂರ್ವಕವಾಗಿ ಹಣದ ಕಥೆ ಕಟ್ಟಿದ್ದೀರಿ. ಜನರ ದೃಷ್ಟಿಯಲ್ಲಿ ನನ್ನ ಕಕ್ಷಿದಾರರ ಇಮೇಜ್ ಹಾಳುಮಾಡುವುದಕ್ಕಾಗಿ ನೀವೆಲ್ಲರೂ ಸುಳ್ಳು, ಆಧಾರರಹಿತ ಆರೋಪಗಳನ್ನು ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸಿದ್ದೀರಿ” ಎಂದು ತಾವ್ಡೆ ಪರ ವಕೀಲರು ನೀಡಿದ ನೋಟಿಸ್ ನಲ್ಲಿ ತಿಳಿಸಲಾಗಿದೆ.
Advertisement