ನವದೆಹಲಿ: ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ಮೊದಲ ಬಾರಿ ಹೊಗಳಿದ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು, ಹಿಂದಿನ ಸಿಎಂ ಅರವಿಂದ್ ಕೇಜ್ರಿವಾಲ್‌ಗಿಂತ "ಸಾವಿರ ಪಟ್ಟು ಉತ್ತಮ" ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ಇಂದಿರಾಗಾಂಧಿ ದೆಹಲಿ ಮಹಿಳಾ ತಾಂತ್ರಿಕ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಕ್ಸೇನಾ, ‘ದಿಲ್ಲಿಯ ಸಿಎಂ ಮಹಿಳೆಯಾಗಿರುವುದು ನನಗೆ ಸಂತಸ ತಂದಿದೆ ಮತ್ತು ಅವರು ತಮ್ಮ ಹಿಂದಿನ ಸಿಎಂಗಿಂತ ಸಾವಿರ ಪಟ್ಟು ಉತ್ತಮರು ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ’ ಎಂದರು.
ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ದೆಹಲಿ ಸಿಎಂ ಅನ್ನು ಹೊಗಳುವಾಗ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಶಿಯವರತ್ತ ನೋಡಿದರು.
ಸಕ್ಸೇನಾ ಅವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ, "ನಿಮ್ಮ ಮುಂದೆ ನಾಲ್ಕು ಮಾರ್ಗದರ್ಶಿ ನಕ್ಷತ್ರಗಳಿವೆ. ಮೊದಲನೆಯದು ನಿಮಗೆ ನಿಮ್ಮ ಬಗ್ಗೆ ಜವಾಬ್ದಾರಿ, ಎರಡನೆಯದು ನಿಮ್ಮ ಪೋಷಕರು ಮತ್ತು ಕುಟುಂಬದ ಬಗೆಗಿನ ಜವಾಬ್ದಾರಿ ಮತ್ತು ಮೂರನೆಯ ಜವಾಬ್ದಾರಿ ಸಮಾಜ ಮತ್ತು ರಾಷ್ಟ್ರ ನಿರ್ಮಾಣದ ಕಡೆಗೆ" ಎಂದರು.
ಇನ್ನು ನಾಲ್ಕನೇ ಜವಾಬ್ದಾರಿ, ಲಿಂಗ ತಾರತಮ್ಯ ಮೆಟ್ಟಿ ನಿಂತು ಎಲ್ಲಾ ಕ್ಷೇತ್ರಗಳಲ್ಲಿ ಇತರರಿಗೆ ಸರಿಸಮಾನವಾಗಿ ನಿಲ್ಲುವ ಮಹಿಳೆ ಎಂದು ಸಾಬೀತುಪಡಿಸುವುದು ಎಂದು ಅವರು ಹೇಳಿದರು.
Advertisement