ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷಕ್ಕಿಂತ ಕಡಿಮೆ ಇರುವಂತೆಯೇ, ನವೆಂಬರ್ 13 ರಂದು ಉಪ ಚುನಾವಣೆ ನಡೆದಿದ್ದ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ಎನ್ ಡಿಎ ಗೆಲುವು ಸಾಧಿಸಿದ್ದು, ವಿಪಕ್ಷಗಳ INDIA ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಬೆಳಗಂಜ್, ಇಮಾಮ್‌ಗಂಜ್, ತರಾರಿ ಮತ್ತು ರಾಮಗಢ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ 40 ರಲ್ಲಿ 30 ಸ್ಥಾನಗಳನ್ನು ಗೆದಿದ್ದ NDA ಬಿಹಾರದಲ್ಲಿ ತನ್ನ ಗೆಲುವಿನ ಓಟವನ್ನು ಉಳಿಸಿಕೊಂಡಿದೆ.
ಉಪ ಚುನಾವಣೆ ಗೆಲುವಿನೊಂದಿಗೆ ಬಿಹಾರ ಬಿಜೆಪಿಯು ಮತ್ತೊಮ್ಮೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಬಿಜೆಪಿಯ ಹಿರಿಯ ನಾಯಕ ಮಂಗಲ್ ಪಾಂಡೆ ಅವರು ಸಿಎಂ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ, ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಸಂತಸ ವಿನಿಮಯ ಮಾಡಿಕೊಂಡರು.
ಚುನಾವಣಾ ರಾಜಕೀಯಕ್ಕೆ ಚೊಚ್ಚಲ ಪ್ರವೇಶವಾಗಿದ್ದ ಮಾಜಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ವಿವಿಧ ಕಾರಣಾಂತರಗಳಿಂದ ಕೊನೆಯ ಕ್ಷಣದಲ್ಲಿ ಎರಡು ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಬದಲಾಯಿಸಬೇಕಾಗಿ ಬಂದ ಕಾರಣ ಕಿಶೋರ್ ಎಲ್ಲಾ ನಾಲ್ಕು ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.
ತರಾರಿ, ಬೆಳಗಂಜ್ ಮತ್ತು ಇಮಾಮ್‌ಗಂಜ್‌ನಲ್ಲಿ ಜನ ಸೂರಾಜ್ ಪಕ್ಷದ ಅಭ್ಯರ್ಥಿಗಳು ಮೂರನೇ ಸ್ಥಾನದಲ್ಲಿದ್ದರೆ, ರಾಮಗಢದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜನ್ ಸೂರಾಜ್ ಪಕ್ಷದ ಅಭ್ಯರ್ಥಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಮಾಮ್‌ಗಂಜ್‌ನ ಜಿತೇಂದ್ರ ಪಾಸ್ವಾನ್ ಅವರು 37,103 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
Advertisement