ನವದೆಹಲಿ: ಬಿಜೆಪಿ ಶನಿವಾರ ಕಾಂಗ್ರೆಸ್‌ನಿಂದ ಒಂದು ಲೋಕಸಭಾ ಸ್ಥಾನವನ್ನು ಕಸಿದುಕೊಂಡಿದ್ದು, ವಿರೋಧ ಪಕ್ಷದ ಸಂಖ್ಯೆಯನ್ನು 98 ಕ್ಕೆ ಇಳಿಸಿತು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿನ ದಿಗ್ವಿಜಯದಿಂದ ರಾಜ್ಯಸಭೆಯಲ್ಲಿ ಎನ್ ಡಿಎ ಸದಸ್ಯರ ಸಂಖ್ಯೆಯೂ ಹೆಚ್ಚಾಗಲಿದೆ. ಮಹಾರಾಷ್ಟ್ರ 19 ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸಲಿದೆ.
ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ಶನಿವಾರ ನಡೆದ ನಾಂದೇಡ್ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, 543 ಸದಸ್ಯ ಬಲದ ಲೋಕಸಭೆಯಲ್ಲಿ ಪಕ್ಷದ ಸ್ಥಾನಗಳ ಸಂಖ್ಯೆ 241 ಕ್ಕೆ ಏರಿದೆ. ಆಗಸ್ಟ್ 26 ರಂದು ಕಾಂಗ್ರೆಸ್ ಸಂಸದ ವಸಂತರಾವ್ ಚವಾಣ್ ಅವರ ನಿಧನದಿಂದ ನಾಂದೇಡ್ ಉಪ ಚುನಾವಣೆ ಅಗತ್ಯವಾಗಿತ್ತು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದುಕೊಂಡಿತ್ತು, ಪಕ್ಷದ ನಾಯಕ ರಾಹುಲ್ ಗಾಂಧಿ ರಾಯ್ ಬರೇಲಿ ಮತ್ತು ವಯನಾಡ್ ನಿಂದ ಗೆದ್ದಿದ್ದರು. ಬಳಿಕ ಆ ಕ್ಷೇತ್ರವನ್ನು ತೆರವು ಮಾಡಿದ್ದರಿಂದ ಅಲ್ಲಿ ಪ್ರಿಯಾಂಕಾ ಗಾಂಧಿ ನಿಂತು ಗೆದ್ದಿದ್ದಾರೆ. ಈಗ ಕಾಂಗ್ರೆಸ್ ವಯನಾಡು ಗೆದ್ದು, ನಾಂದೇಡ್ ಸೋತ ನಂತರ ಕೆಳಮನೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 98 ಆಗಿದೆ.
ಪಶ್ಚಿಮ ಬಂಗಾಳದ ಬಸಿರ್‌ಹತ್ ಸ್ಥಾನವು ಈಗ ಲೋಕಸಭೆಯಲ್ಲಿ ಖಾಲಿಯಾಗಿರುವ ಏಕೈಕ ಸ್ಥಾನವಾಗಿದೆ. ಟಿಎಂಸಿ ಸಂಸದ ಎಸ್‌ಕೆ ನೂರುಲ್ ಇಸ್ಲಾಂ ಸೆಪ್ಟೆಂಬರ್ 25 ರಂದು ನಿಧನರಾದರು. ಆದರೆ, ಕಲ್ಕತ್ತಾ ಹೈಕೋರ್ಟ್‌ನಲ್ಲಿ ಇಸ್ಲಾಂ ವಿರುದ್ಧ ಚುನಾವಣಾ ಅರ್ಜಿ ವಿಚಾರಣೆ ನಡೆಯುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಿಲ್ಲ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಅಭೂತಪೂರ್ವ ಗೆಲುವು ರಾಜ್ಯಸಭೆಯಲ್ಲಿ ಅದರ ನಿರೀಕ್ಷೆಯನ್ನು ಹೆಚ್ಚಿಸಿದೆ ಮತ್ತು ಮೇಲ್ಮನೆಯಲ್ಲಿ ಬಹುಮತವನ್ನು ಪಡೆಯಲು ನೆರವಾಗುತ್ತದೆ. ಮಹಾರಾಷ್ಟ್ರ 19 ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸುತ್ತದೆ. ಪ್ರಸ್ತುತ, ಮೇಲ್ಮನೆಯಲ್ಲಿ ಬಿಜೆಪಿ ಏಳು ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ ಮೂರು, ಶಿವಸೇನೆ ಒಂದು, ಶಿವಸೇನೆ-ಯುಬಿಟಿ ಎರಡು, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮೂರು, ಎನ್‌ಸಿಪಿ-ಶರದ್ ಪವಾರ್ ಎರಡು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಒಬ್ಬರು ಸದಸ್ಯರಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿ 95 ಸಂಸದರನ್ನು ಹೊಂದಿದೆ. ಇದರೊಂದಿಗೆ NDA ಮೈತ್ರಿಕೂಟದ ಸಂಖ್ಯೆ 112ಕ್ಕೆ ಏರಿದೆ. ಅಲ್ಲದೆ ಆಡಳಿತ ಪಕ್ಷವನ್ನು ಬೆಂಬಲಿಸುವ ಆರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅತಿ ಹೆಚ್ಚು ಸಂಸದರು ಉತ್ತರ ಪ್ರದೇಶದಿಂದ ಬಂದಿದ್ದು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.
ಮಹಾರಾಷ್ಟ್ರದಿಂದ ತಕ್ಷಣ ಯಾವುದೇ ಖಾಲಿ ಇಲ್ಲದಿದ್ದರೂ ಮೇಲ್ಮನೆಯಲ್ಲಿ ವಿವಿಧ ರಾಜ್ಯಗಳಿಂದ ತೆರವಾಗಿರುವ 10 ಸ್ಥಾನಗಳಿವೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಬಿಜೆಪಿಗೆ ಹೋಗುವ ಸಾಧ್ಯತೆಯಿದೆ. ನಾಮನಿರ್ದೇಶಿತ ಸದಸ್ಯರ ನಾಲ್ಕು ಸ್ಥಾನಗಳೂ ಖಾಲಿ ಇವೆ. ಇದು 245 ಸದಸ್ಯ ಬಲದ ಸದನದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅರ್ಧದಷ್ಟು ಸದಸ್ಯರನ್ನು ಹೊಂದಲು ಸುಲಭವಾಗುತ್ತದೆ.
Advertisement