ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, ಯಾರಿಗೆ ಗೆಲುವು ಎಂಬುದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.
ಜಾರ್ಖಾಂಡ್ ವಿಧಾನಸಭಾ ಕ್ಷೇತ್ರದಲ್ಲಿ 81 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ನವೆಂಬರ್ 13ರಂದು ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ಹಾಗೂ ನವೆಂಬರ್ 20ರಂದು ಎರಡನೇ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.
ಬಿಜೆಪಿ ನೇತೃತ್ವದ ಎನ್‌ಡಿಎ ಜಾರ್ಖಂಡ್ ರಾಜ್ಯದಲ್ಲಿ ಅಧಿಕಾರ ಪಡೆಯುವ ವಿಶ್ವಾಸದಲ್ಲಿದೆ. ಮಿತ್ರಪಕ್ಷಗಳ ಜೊತೆ ಸೀಟು ಹಂಚಿಕೊಂಡಿದ್ದ ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು) 10 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು, ಜೆಡಿಯು 2 ಕ್ಷೇತ್ರಗಳಲ್ಲಿ ಮತ್ತು ಜನಶಕ್ತಿ ಪಕ್ಷ (ರಾಮ್ ವಿಲಾಸ್) 1 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ.
ಇಂಡಿಯಾ ಒಕ್ಕೂಟದಲ್ಲಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ 41 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ 30 ಸ್ಥಾನಗಳಲ್ಲಿ, ಆರ್ ಜೆಡಿ 6 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) 4 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಇನ್ನು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಕೂಡ ಇಂದು ಪ್ರಕಟಗೊಳ್ಳಲಿದ್ದು, ಯಾರಿಗೆ ಗೆಲುವು ಎಂಬುದು ಇಂದು ಬಹಿರಂಗಗೊಳ್ಳಲಿದೆ.
ಮಹಾರಾಷ್ಟ್ರದ ಈ ಬಾರಿಯ ಚುನಾವಣೆ ಶಿವಸೇನೆ V/S ಶಿವಸೇನೆ, ಎನ್‌ಸಿಪಿ V/S ಎನ್‌ಸಿಪಿ ನಡುವಿನ ಪೈಪೋಟಿಗೆ ಸಾಕ್ಷಿಯಾಗಿದೆ.
ಎರಡೂ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಜನರ ಮುಂದೆ ಹೋಗಿವೆ. ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್) ಬಣ ಎದುರಾಳಿಗಳಾಗಿವೆ. ಯಾರಿಗೆ ಎಷ್ಟು ಸ್ಥಾನ ಸಿಗಲಿದೆ? ಎಂಬುದು ಕುತೂಹಲವಾಗಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕೇವಲ ರಾಜಕೀಯ ಅಖಾಡವಾಗಿ ಉಳಿದಿಲ್ಲ. ಕಾರಣ ಕಾಂಗ್ರೆಸ್ ನಾಯಕರ ಪಾಲಿಗೆ ಈ ರಾಜ್ಯದಲ್ಲಿ ಗೆದ್ದೇ ಗೆಲ್ಲಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.
ಹರ್ಯಾಣ ಸೇರಿದಂತೆ ಅದಕ್ಕೂ ಹಿಂದಿನ ವಿಧಾನಸಭಾ ಚುನಾವಣೆಗಳು ಸ್ವತಃ ಕಾಂಗ್ರೆಸ್ ನಾಯಕರಿಗೆ ಆಘಾತ ನೀಡಿವೆ. ಹೀಗಾಗಿ ಜಾರ್ಖಂಡ್ ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಮೈತ್ರಿಕೂಟ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಆದರೆ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಾರ್ಖಂಡ್ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಕಮಾಲ್ ಮಾಡುವ ನಿರೀಕ್ಷೆ ದಟ್ಟವಾಗಿದೆ.
Advertisement