'ಮಹಾರಾಷ್ಟ್ರದಿಂದ ಪಾಠ ಕಲಿಯಬೇಕು.. ನನ್ನ ಸಮಯ ಕೂಡ ಬರುತ್ತದೆ': ರಾಜಕೀಯ ಪ್ರವೇಶ ಕುರಿತು Robert Vadra ಅಚ್ಚರಿ ಹೇಳಿಕೆ

ಕೇರಳದ ವಯನಾಡ್ (ವಯನಾಡು) ಲೋಕಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಇತ್ತೀಚಿನ ವರದಿಗಳ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಬರೊಬ್ಬರಿ 4 ಲಕ್ಷ ಮತಗಳ ಮುನ್ನಡೆಯಲ್ಲಿದ್ದು ಗೆಲುವು ಖಚಿತಪಡಿಸಿಕೊಂಡಿದ್ದಾರೆ.
Priyanka Gandhi Vadra- Robert Vadra
ರಾಬರ್ಟ್ ವಾದ್ರಾ ಮತ್ತು ಪ್ರಿಯಾಂಕಾ ಗಾಂಧಿ
Updated on

ನವದೆಹಲಿ: ವಯನಾಡು ಲೋಕಸಭಾ ಉಪ ಚುನಾವಣೆಯಲ್ಲಿ ತಮ್ಮ ಪತ್ನಿ ಪ್ರಿಯಾಂಕಾ ಗಾಂಧಿ ವಾದ್ರಾ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ತಮ್ಮ ರಾಜಕೀಯ ಪ್ರವೇಶದ ಕುರಿತು ಉದ್ಯಮಿ ರಾಬರ್ಟ್ ವಾದ್ರಾ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಕೇರಳದ ವಯನಾಡ್ (ವಯನಾಡು) ಲೋಕಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಇತ್ತೀಚಿನ ವರದಿಗಳ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಬರೊಬ್ಬರಿ 4 ಲಕ್ಷ ಮತಗಳ ಮುನ್ನಡೆಯಲ್ಲಿದ್ದು ಗೆಲುವು ಖಚಿತಪಡಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ನೇರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಅಗ್ರ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಪ್ರಿಯಾಂಕಾ ಗಾಂಧಿ ಅವರು ತಮ್ಮ ಸಮೀಪದ ಅಭ್ಯರ್ಥಿಗಿಂತ 4 ಲಕ್ಷ ಮತಗಳ ಬಹುಮತವನ್ನು ಗಳಿಸುವ ಮೂಲಕ ಗೆಲುವಿನತ್ತ ದಾಪುಗಾಲಿರಿಸಿದ್ದಾರೆ.

Priyanka Gandhi Vadra- Robert Vadra
ವಯನಾಡು ಲೋಕಸಭಾ ಉಪಚುನಾವಣೆ: ಪ್ರಿಯಾಂಕಾ ಗಾಂಧಿಗೆ ಭರ್ಜರಿ ಮುನ್ನಡೆ

ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಪ್ರತಿಕ್ರಿಯಿಸಿದ್ದು, "ಮೊದಲನೆಯದಾಗಿ, ಪ್ರಿಯಾಂಕಾ ಅವರ ಪ್ರಯತ್ನವನ್ನು ಗುರುತಿಸಿದ್ದಕ್ಕಾಗಿ ನಾನು ವಯನಾಡ್ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಖಂಡಿತವಾಗಿಯೂ ಭಾರಿ ಬಹುಮತದೊಂದಿಗೆ ಗೆಲ್ಲುತ್ತಾರೆ ಎಂಬ ಭರವಸೆ ಇತ್ತು.

ಈಗ ಅದು ನಿಜವಾಗುತ್ತಿದೆ. ಖಂಡಿತಾ ಅವರು ಸಂಸತ್ತಿನಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಗೂಡಿಸಲು ಶ್ರಮಿಸುತ್ತಾರೆ. ಸದ್ಯ, ಪ್ರಿಯಾಂಕಾ ಪುಸ್ತಕ ಓದುವುದರಲ್ಲಿ ಮತ್ತು ಮಕ್ಕಳ ಆರೈಕೆಯಲ್ಲಿ ನಿರತರಾಗಿದ್ದರು. ದೇಶದ ಜನರ ಸೇವೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದರು. ‘ಫಲಿತಾಂಶದಲ್ಲಿ ಪ್ರಿಯಾಂಕಾ ಮುಂಚೂಣಿಯಲ್ಲಿರುವುದು ಸಂತಸ ತಂದಿದೆ’ ಎಂದು ಹೇಳಿದರು.

'ನನ್ನ ಸಮಯ ಕೂಡ ಬರುತ್ತದೆ'

ಇದೇ ವೇಳೆ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು.. ''ನಾನು ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಜನರ ಸೇವೆಗಾಗಿ ಸಂಸತ್ ಪ್ರವೇಶಿಸುವ ಅಗತ್ಯವಿಲ್ಲ. ಸಂಸತ್ತಿನಲ್ಲಿ ಪ್ರಿಯಾಂಕಾ ಜನರ ಧ್ವನಿಯಾಗಲಿದ್ದಾರೆ. ಅಂತಹ ಸಮಯ ನನಗೂ ಬರಬಹುದು. ಜನರು ಏನು ಬಯಸುತ್ತಾರೋ ಅದು ನಡೆಯುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಮಹಾರಾಷ್ಟ್ರ ಫಲಿತಾಂಶದಿಂದ ಪಾಠ ಕಲಿಯಬೇಕು

ಇದೇ ವೇಳೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕುರಿತು ಮಾತನಾಡಿದ ರಾಬರ್ಟ್ ವಾದ್ರಾ, 'ಮಹಾರಾಷ್ಟ್ರ ಫಲಿತಾಂಶದಿಂದ ಪಾಠ ಕಲಿಯಬೇಕು. ಜನರ ತೀರ್ಪನ್ನು ಗೌರವಿಸಬೇಕು. ಗೆಲ್ಲುವ ಪಕ್ಷದ ಜತೆಗೆ ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು. ಜಾರ್ಖಂಡ್ ಫಲಿತಾಂಶದಿಂದ ಸಂತಸವಾಗಿದೆ. ಇಡಿ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ಆಡಳಿತ ಪಕ್ಷಕ್ಕೆ ಸಮಸ್ಯೆಗಳನ್ನು ಸೃಷ್ಟಿಸಿತು. ಆದರೆ ಜನರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರಾಬರ್ಟ್ ವಾದ್ರಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com