ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಪ್ರಚಂಡ ಬಹುಮತ ಸಾಧಿಸುತ್ತಿದ್ದಂತೆ ವಿಜಯೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಹಾರಾಷ್ಟ್ರದಲ್ಲಿ ನಕಾರಾತ್ಮಕತೆಯ ರಾಜಕಾರಣ ಕಳೆದುಹೋಗಿದ್ದು ಸುಳ್ಳು ಮತ್ತು ದ್ರೋಹ ಸೋತಿದೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ 'ಮಹಾಯುತಿ' ವಿಜಯವನ್ನು ನಾವು ಆಚರಿಸುತ್ತಿದ್ದೇವೆ. ಇಂದು ಮಹಾರಾಷ್ಟ್ರದಲ್ಲಿ 'ವಿಕಾಸವಾದ' ಗೆದ್ದಿದೆ, ನಿಜವಾದ ಸಾಮಾಜಿಕ ಮೌಲ್ಯಗಳು ಗೆದ್ದಿವೆ, ಇಂದು ರಾಜ್ಯದಲ್ಲಿ ಸುಳ್ಳು, ದ್ರೋಹ ಸೋತಿದೆ ಎಂದು ಪ್ರಧಾನಿ ಹೇಳಿದರು. ಈ ಗೆಲುವಿನೊಂದಿಗೆ ಮಹಾರಾಷ್ಟ್ರ, ಭಾರತದ ಅಭಿವೃದ್ಧಿಯ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ ಎಂದು ಹೇಳಿದರು.
ವಿರೋಧ ಪಕ್ಷ ಇಂಡಿಯಾ ಕೂಟವನ್ನು ತರಾಟೆಗೆ ತೆಗೆದುಕೊಂಡ ಮೋದಿ, ಮಹಾರಾಷ್ಟ್ರದಲ್ಲಿ ಮತದಾರರು ವಿಭಜಕ ಶಕ್ತಿಗಳಿಗಿಂತ ಅಭಿವೃದ್ಧಿಯುತ ಪಕ್ಷವನ್ನು ಆರಿಸುವ ಮೂಲಕ ಸ್ಪಷ್ಟ ತೀರ್ಪು ನೀಡಿದ್ದಾರೆ ಎಂದು ಹೇಳಿದರು. 'ಏಕ್ ಹೈ ತೋ ಸೇಫ್ ಹೈ' (ಒಂದಾಗಿದ್ದರೆ ಸುರಕ್ಷಿತವಾಗಿರುತ್ತೀವಿ) ಎಂಬ ಸಂದೇಶವನ್ನು ಮಹಾರಾಷ್ಟ್ರ ಸ್ಪಷ್ಟವಾಗಿ ನೀಡಿದೆ. ಕಾಂಗ್ರೆಸ್ ಸಂವಿಧಾನದ ಹೆಸರಲ್ಲಿ ಸುಳ್ಳು ಹೇಳುತ್ತಾ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯನ್ನು ವಿಭಜಿಸಬಹುದು ಎಂದು ಭಾವಿಸಿತ್ತು ಎಂದು ಮೋದಿ ಹೇಳಿದರು.
ಭಾರತದ ವಾಣಿಜ್ಯ ರಾಜ್ಯದಲ್ಲಿ ಎನ್‌ಡಿಎ ಬಣದ ಅದ್ಭುತ ಗೆಲುವಿನ ಕುರಿತು ಮಾತನಾಡಿದ ಮೋದಿ ಅವರು, ಕಳೆದ 50 ವರ್ಷಗಳಲ್ಲಿ, ಯಾವುದೇ ಪಕ್ಷ ಅಥವಾ ಚುನಾವಣಾ ಪೂರ್ವ ಮೈತ್ರಿಗೆ ಸಿಕ್ಕ ಅತಿದೊಡ್ಡ ವಿಜಯವಾಗಿದೆ. ಇದು ಸತತ ಮೂರನೇ ಬಾರಿಗೆ, ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಬಿಜೆಪಿಯ ಆಡಳಿತ ಮಾದರಿಯನ್ನು ಮಾನ್ಯ ಮಾಡುತ್ತದೆ. ಮಹಾರಾಷ್ಟ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ರಚನೆಗೆ ಮಾಡಲಿದೆ ಎಂದರು.
Advertisement