ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ EVM ಯಂತ್ರಗಳ ಹ್ಯಾಕ್ ಆಗಿದೆ ಎಂಬ ಹೇಳಿಕೆ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ NCP ಸಂಸದ ಪ್ರಫುಲ್ ಪಟೇಲ್ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳಿಗೆ ಸೋಲಿನಿಂದಾದ ನಷ್ಟವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಲಾಗಿದೆ. ವಿರೋಧ ಪಕ್ಷಗಳಿಗೆ ಸೋಲಿನಿಂದಾದ ನಷ್ಟವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದು ಹುಳಿ ದ್ರಾಕ್ಷಿಯ ಪ್ರಕರಣವಾಗಿದೆ. ನಮ್ಮ ವಿರೋಧಿಗಳು ಈಗ ಹೇಳುತ್ತಿರುವ ಹೇಳಿಕೆಗೆ ಅರ್ಥವಿಲ್ಲ . ಜನರು ಅವರನ್ನು ತಿರಸ್ಕರಿಸಿದ್ದು, ಈಗ ಇವಿಎಂಗಳನ್ನು ದೂಷಿಸುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವ ಹಾಗೂ ಮಹಾಯುತಿಯ ಸದೃಢತೆಗಾಗಿ ಮಹಾರಾಷ್ಟ್ರದ ಜನರು ಮತ ಹಾಕಿರುವುದು ನಮಗೆ ಖಚಿತವಾಗಿದೆ ಎಂದು ಅವರು ANI ಸುದ್ದಿಸಂಸ್ಥೆಗೆ ತಿಳಿಸಿದರು.
ಆಯ್ದ ಕಡೆಗಳಲ್ಲಿ ಇವಿಎಂ ಹ್ಯಾಕ್ ಮಾಡಲಾಗುತ್ತದೆ ಎಂಬ ವಿಷಯ ತಿಳಿದು ತಮ್ಮ ಪಕ್ಷದ ನಾಯಕರು ಅಚ್ಚರಿಗೊಂಡಿದ್ದಾರೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಭಾಗೇಲ್ ಇವಿಎಂ ಬಗ್ಗೆ ಚರ್ಚಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಪರಮೇಶ್ವರ್ ಭಾನುವಾರ ಹೇಳಿಕೆ ನೀಡಿದ್ದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಆಘಾಡಿ ತುಂಬಾ ಹೀನಾಯವಾಗಿ ಸೋತಿದೆ. ಮಹಾರಾಷ್ಟ್ರದಲ್ಲಿನ ನಮ್ಮ ನಾಯಕರು ಕುಳಿತು ಚರ್ಚಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಇವಿಎಂ ಹ್ಯಾಕ್ ಆಗಲ್ಲ, ಕೆಲವು ಕಡೆಗಳಲ್ಲಿ ಮಾತ್ರ ಇವಿಎಂ ಹ್ಯಾಕ್ ಮಾಡಲಾಗುತ್ತದೆ ಎಂಬ ವಿಚಾರ ತಿಳಿದು ಅಚ್ಚರಿಗೊಂಡಿದ್ದಾರೆ. ಒಂದು ವೇಳೆ ಅದು ನಿಜವಾಗಿದ್ದರೆ ಅದರ ಬಗ್ಗೆ ಏನನ್ನೂ ಹೇಳಲು ಸಾಧ್ಯವಾಗಿಲ್ಲ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ. ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
Advertisement