ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಿರುವ ಸಾಧ್ಯತೆಗಳಿವೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಮಹಾರಾಷ್ಟ್ರದ ವೀಕ್ಷಕರೂ ಆಗಿರುವ ಸಚಿವ ಜಿ ಪರಮೇಶ್ವರ್ ಅವರು ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಇವಿಎಂ ಬಳಸದಂತೆ ನಾವು ಒತ್ತಾಯಿಸುತ್ತಿದ್ದೇವೆ. ಪೇಪರ್ ಬ್ಯಾಲೆಟ್‌ಗೆ ಮರಳಿ, ಇವಿಎಂಗಳನ್ನು ತೆಗೆದುಹಾಕಬಾರದೇಕೆ? ವಾಸ್ತವವಾಗಿ, ಎಐಸಿಸಿ ಒಂದು ಸಮಿತಿಯನ್ನು ರಚಿಸಿತ್ತು. ಆದರೆ, ಅಧಿಕಾರ ಅವರ ಬಳಿ ಇದೆ (ಕೇಂದ್ರ), ಕೆಲವು ಎನ್‌ಡಿಎ ನಾಯಕರು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ನ್ಯಾಯಸಮ್ಮತ ಚುನಾವಣೆಗೆ ಪೇಪರ್ ಬ್ಯಾಲೆಟ್ ವ್ಯವಸ್ಥೆ ತರುವುದು ಮತ್ತು ಇವಿಎಂ ರದ್ದು ಮಾಡುವುದು ಉತ್ತಮವಾಗಿದೆ. ಭಾರತದಲ್ಲಿ ಇವಿಎಂಗೆ ವಿರೋಧವಿದೆ, ಅಮೆರಿಕದಲ್ಲಿಯೂ ಸಹ ವಿರೋಧ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಕೆಲವು ಬಿಜೆಪಿ ನಾಯಕರೂ ಕೂಡ ಇವಿಎಂಗಳನ್ನು ವಿರೋಧಿಸುತ್ತಿದ್ದಾರೆ, ರಾಜ್ಯದಾದ್ಯಂತ ಇವಿಎಂ ಹ್ಯಾಕ್ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ, ಕೆಲವೆಡೆ ಹ್ಯಾಕ್ ಆಗುವ ಸಾಧ್ಯತೆಗಳಿವೆ ಎಂದರು.
ಬಳಿಕ ರಾಜ್ಯದ ಉಪಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ ಅವರು, ವಿವಿಧ ಹಗರಣಗಳ ಬಗ್ಗೆ ಬಿಜೆಪಿ ನಾಯಕರ ಆರೋಪಗಳ ಬಗ್ಗೆ ಜನರು ತಲೆಕೆಡಿಸಿಕೊಂಡಿಲ್ಲ. ಜನರು ಬಯಸುತ್ತಿರುವುದು ಅಭಿವದ್ಧಿಯಾಗಿದೆ. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದೆವು. ಗೆದ್ದಿದ್ದೇವೆಂದು ಹೇಳಿದರು.
ಈ ಫಲಿತಾಂಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಸಿಎಂ ಡಿ.ಕೆ.ಶಿವಕುಮಾರ್ ಅವರ ಪಾತ್ರ ದೊಡ್ಡದು. ನಮ್ಮ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದು, ನಮ್ಮ ಗೆಲುವಿಗೆ ಕಾರಣವಾಗಿದೆ. ನಮ್ಮ ಪೊಲೀಸ್ ಇಂಟಲಿಜೆನ್ಸ್ ಕೂಡ ನಾವು ಗೆಲ್ಲುತ್ತೇವೆ ಎಂದು ಹೇಳಿದ್ದರು ಎಂದರು.
Advertisement