ಹೈದರಾಬಾದ್: ತೆಲಂಗಾಣದಲ್ಲಿ 'ಯುಂಗ್ ಇಂಡಿಯಾ ಸ್ಕಿಲ್ ಯೂನಿವರ್ಸಿಟಿ' ಸ್ಥಾಪನೆಗಾಗಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಘೋಷಿಸಿದ್ದ ರೂ. 100 ಕೋಟಿ ದೇಣಿಗೆಯನ್ನು ತೆಲಂಗಾಣ ಸರ್ಕಾರ ಸ್ವೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಸೋಮವಾರ ಹೇಳಿದ್ದಾರೆ.
ದೇಣಿಗೆ ಸ್ವೀಕರಿಸಿದರೆ ಅದು ರಾಜ್ಯ ಸರ್ಕಾರ ಅಥವಾ ಸಿಎಂ ಪರವಾಗಿ ಕಾಣಿಸಬಹುದು ಎಂಬ ಅದಾನಿ ಅವರ ಹೇಳಿಕೆ ಅನಗತ್ಯ ಚರ್ಚೆಗೆ ಕಾರಣವಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದಾನಿ ಗ್ರೂಪ್ ಸೇರಿದಂತೆ ಯಾವುದೇ ಸಂಸ್ಥೆಯಿಂದ ತೆಲಂಗಾಣ ಸರ್ಕಾರ ತನ್ನ ಖಾತೆಗೆ ಒಂದು ರೂಪಾಯಿಯನ್ನೂ ಸ್ವೀಕರಿಸಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಮತ್ತು ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳು ಅನಗತ್ಯ ಚರ್ಚೆಗಳು ಮತ್ತು ಸನ್ನಿವೇಶಗಳಲ್ಲಿ ಭಾಗಿಯಾಗಲು ಬಯಸುವುದಿಲ್ಲ. ಅದು ರಾಜ್ಯ ಸರ್ಕಾರ ಅಥವಾ ನನ್ನ ಸ್ವಂತ ಪ್ರತಿಷ್ಠೆಗೆ ಧಕ್ಕೆ ತರುತ್ತದೆ. ಅದಕ್ಕಾಗಿಯೇ, ರಾಜ್ಯ ಸರ್ಕಾರದ ಪರವಾಗಿ ನಮ್ಮ ಅಧಿಕಾರಿ ಜಯೇಶ್ ರಂಜನ್, ಅದಾನಿ ಅವರಿಗೆ ಪತ್ರ ಬರೆದಿದ್ದಾರೆ. ಸದ್ಯದ ಪರಿಸ್ಥಿತಿ ಮತ್ತು ವಿವಾದಗಳಿಂದಾಗಿ ನಿಮ್ಮ 100 ಕೋಟಿ ರೂಪಾಯಿ ದೇಣಿಗೆಯನ್ನು ಸ್ವೀಕರಿಸಲು ತೆಲಂಗಾಣ ಸರ್ಕಾರ ಸಿದ್ಧವಾಗಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ. ವರ್ಗಾಯಿಸದಂತೆ ಅದಾನಿ ಫೌಂಡೇಶನ್‌ಗೆ ಪತ್ರದಲ್ಲಿ ಸ್ಪಷ್ಟವಾಗಿ ಮನವಿ ಮಾಡಲಾಗಿದೆ. ವಿಶ್ವವಿದ್ಯಾಲಯಕ್ಕೆ ನೀಡಿದ ದೇಣಿಗೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯುವ ರಾಜ್ಯ ಸರ್ಕಾರದ ಪ್ರಯತ್ನಗಳು ಇತ್ತೀಚೆಗೆ ಫಲ ನೀಡಿವೆ. ಅದಾನಿ ಪ್ರಸ್ತಾಪಿಸಿದ ಮೊತ್ತವು ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳ ಭಾಗವಾಗಿದೆ ಎಂದು ರೆಡ್ಡಿ ಹೇಳಿದರು.
Advertisement