ಡೆಹ್ರಾಡೂನ್: ಹಿಮಾಚಲ ಪ್ರದೇಶದಲ್ಲಿ ತಮ್ಮ ಸರಕುಗಳ ವ್ಯಾಪಾರಕ್ಕಾಗಿ ಬಂದಿದ್ದ ಕಾಶ್ಮೀರದ ಇಬ್ಬರು ಶಾಲು ಮಾರಾಟಗಾರರನ್ನು ಬೆದರಿಸಿದ್ದ ಮಹಿಳೆಯೊಬ್ಬರು ಮಾರಾಟಗಾರರ ಬಳಿ ಕ್ಷಮೆ ಕೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ 2.46 ನಿಮಿಷಗಳ ವೀಡಿಯೋದಲ್ಲಿ ಮಹಿಳೆ ಬೆದರಿಕೆ ಹಾಕಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಘಟನೆ ನಡೆದು ಒಂದು ದಿನದ ನಂತರ ಮಹಿಳೆ ಕ್ಷಮೆಯಾಚಿಸಿದ್ದಾರೆ. ಇಬ್ಬರು ಕಾಶ್ಮೀರಿಗಳಿಗೆ ಗ್ರಾಮಕ್ಕೆ ಬರಬೇಡಿ ಎಂದು ಹೇಳಿದ್ದು ಮತ್ತು ಅವರು 'ಹಿಂದೂಸ್ತಾನಿ' ಎಂದು ಸಾಬೀತುಪಡಿಸಲು 'ಜೈ ಶ್ರೀ ರಾಮ್' ಎಂದು ಹೇಳುವಂತೆ ಮಹಿಳೆ ಮಾರಾಟಗಾರರಿಗೆ ಒತ್ತಾಯಿಸಿದ್ದಾರೆ.
ಮಂಗಳವಾರ ಕ್ಷಮೆ ಯಾಚಿಸಿರುವ ಮಹಿಳೆ, "ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಾನು ಉದ್ದೇಶಪೂರ್ವಕವಾಗಿ ಏನಾದರೂ ತಪ್ಪು ಹೇಳಿದ್ದರೆ ಕ್ಷಮೆಯಾಚಿಸುತ್ತೇನೆ. ನನ್ನ ಮನೆಗೆ ಬರಬೇಡಿ ಎಂದು ನಾನು ಅವರಿಗೆ ಹೇಳಿದೆ ಏಕೆಂದರೆ ಕೆಲವು ಮಹಿಳೆಯರು ಇಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ ಮತ್ತು ಅಪರಿಚಿತರಿಗೆ ಭಯಪಡುತ್ತಾರೆ" ಎಂದು ಹೇಳಿದ್ದಾರೆ. ಈ ವೀಡಿಯೊವನ್ನು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಹಮಿ ಹಂಚಿಕೊಂಡಿದ್ದಾರೆ. ಅವರು ಮೊದಲ ವೀಡಿಯೊ ಎಕ್ಸ್‌ನಲ್ಲಿ ಬಂದಾಗ ಘಟನೆಯ ವಿರುದ್ಧ ಧ್ವನಿ ಎತ್ತಿದರು.
ವೀಡಿಯೋ ಹಿಮಾಚಲದ ಹಮೀರ್‌ಪುರ ಅಥವಾ ಕಂಗ್ರಾ ಜಿಲ್ಲೆಗಳ ಹಳ್ಳಿಯದ್ದು ಎಂದು ಖುಹಮಿ ಹೇಳಿದ್ದರು. ಆದರೆ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ನಮ್ಮ ಏರಿಯಾಗೆ ನೀವು ಬರಬೇಡಿ, ಯಾರೂ ನಿಮ್ಮ ಉತ್ಪನ್ನಗಳನ್ನು ಖರೀದಿಸುವುದಿಲ್ಲ. ಹಿಂದೂ ಜನರಿಂದ ಖರೀದಿಸುತ್ತಾರೆ ಎಂದು ಮಹಿಳೆ ಹಿಂದಿನ ವೀಡಿಯೊದಲ್ಲಿ ಮಾರಾಟಗಾರರಿಗೆ ಬೆದರಿಕೆ ಹಾಕುತ್ತಿರುವುದು ದಾಖಲಾಗಿದೆ.
Advertisement