ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ 70 ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಮತ್ತು ಯಾವುದೇ ಮೈತ್ರಿ ಇಲ್ಲ ಎಂದು ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದೇವೆಂದರ್ ಯಾದವ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ನಂತರ ಯಾದವ್ ಅವರು ದೆಹಲಿ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಮತ್ತು ಮೈತ್ರಿಯ ಸಾಧ್ಯತೆಗಳ ಕುರಿತು ಎಎನ್‌ಐ ಜೊತೆ ಮಾತನಾಡಿದರು.
"ನಾವು ಮೊದಲೇ ಸಿಎಂ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ. ನಾವು ಎಲ್ಲಾ 70 ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ನಾವು ಗೆದ್ದ ನಂತರ ನಮ್ಮ ನಾಯಕನನ್ನು ಆಯ್ಕೆ ಮಾಡುತ್ತೇವೆ. ಅದೇ ವಿಧಾನವನ್ನು ದೆಹಲಿಯಲ್ಲಿ ಅಳವಡಿಸಿಕೊಳ್ಳಲಾಗುವುದು. ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ" ಎಂದರು.
ಇಂದು ಕಾಂಗ್ರೆಸ್‌ನ ನಾಲ್ಕನೇ ಹಂತದ ದೆಹಲಿ ನ್ಯಾಯ ಯಾತ್ರೆಯ ನೇತೃತ್ವ ವಹಿಸಿದ್ದ ಯಾದವ್, ಎಎಪಿ ಮತ್ತು ಬಿಜೆಪಿಯ "ದುರಾಡಳಿತ" ದಿಂದ ಜನ "ತುಂಬಾ ಬೇಸರಗೊಂಡಿದ್ದಾರೆ" ಎಂದರು.
ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ಸಿಗುತ್ತಿಲ್ಲ, ಬಡವರಿಗೆ ಪಡಿತರ ಚೀಟಿ ಸಿಗುತ್ತಿಲ್ಲ, ರಸ್ತೆಗಳು ಹಾಳಾಗಿವೆ, ಮಾಲಿನ್ಯ ಮಿತಿ ಮೀರಿದೆ, ಯುವಕರು ನಿರುದ್ಯೋಗಿಗಳಿದ್ದಾರೆ, ಮಹಿಳೆಯರು ಹಣದುಬ್ಬರದಿಂದ ಕಂಗೆಟ್ಟಿದ್ದಾರೆ. ಕೇವಲ ಪ್ರದರ್ಶನಕ್ಕಾಗಿ ಎಎಪಿ ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿದೆ. ಇದು ಕೇಜ್ರಿವಾಲ್ ಮಾದರಿ ಎಂದು ಆಪ್ ವಿರುದ್ಧ ವಾಗ್ದಾಳಿ ನಡೆಸಿದರು.
ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಪ್ರಿಯವ್ರತ್ ಸಿಂಗ್ ಅವರನ್ನು ದೆಹಲಿ ಚುನಾವಣೆಗೆ "ವಾರ್ ರೂಮ್" ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
Advertisement