ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಯ್ಕೆಗೆ ಕೊನೆಯ ಹಂತದ ಕಸರತ್ತು ನಡೆಯುತ್ತಿರುವಂತೆಯೇ ಬಿಜೆಪಿ ಕೇಂದ್ರ ನಾಯಕತ್ವದ ನಿರ್ಧಾರಕ್ಕೆ ಬದ್ದರಾಗಿದ್ದು, ಸಿಎಂ ಕುರ್ಚಿಗಾಗಿ ಮಹಾಯುತಿ ಮೈತ್ರಿಕೂಟ ಬಿಡುವುದಿಲ್ಲ ಎಂದು ಶಿವಸೇನೆ ಹೇಳಿದೆ.
ಸಿಎಂ ಏಕನಾಥ್ ಶಿಂಧೆ ಎರಡು ದಿನಗಳ ಹಿಂದೆಯೇ ಸಿಎಂ ಕುರ್ಚಿಗಾಗಿ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಮಹಾಯುತಿ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ. ನಾವು ಉದ್ಧವ್ ಠಾಕ್ರೆ ಅಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ಮೈತ್ರಿಯಿಂದ ಹೊರಗೆ ಹೋಗುವುದಿಲ್ಲ ಎಂದು ಶಿವಸೇನಾ ಸಂಸದ ನರೇಶ್ ಮಾಸ್ಕೆ ಹೇಳಿದ್ದಾರೆ.
ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರದ ಅಭಿವೃದ್ಧಿ, ಸಮೃದ್ಧಿಗೆ ಬಗ್ಗೆ ಚರ್ಚಿಸಲಾಗಿದೆ. ಇದುವರೆಗೆ ಮಹಾರಾಷ್ಟ್ರದ ಅಭಿವೃದ್ಧಿ ಹಿಂದೆ ರಾಜ್ಯ ಸರ್ಕಾರದ ಹಿಂದೆ ಕೇಂದ್ರ ಸರ್ಕಾರ ನಿಂತಿದ್ದು, ಮುಂದೆಯೂ ಅದೇ ರೀತಿ ನಿಲ್ಲಬೇಕು. ಮಹಾರಾಷ್ಟ್ರ ಜನರ ಪರವಾಗಿ ಅಮಿತ್ ಶಾ ಈ ರೀತಿಯ ಮನವಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಶಿಂಧೆ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಗುರುವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರದ ಮುಂದಿನ ಸರ್ಕಾರದ ಅಧಿಕಾರ ಹಂಚಿಕೆ ಕುರಿತು ಮಾತನಾಡಿದ್ದಾರೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ಮಹಾರಾಷ್ಟ್ರ ಸಿಎಂ ಕುರಿತು ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗ ನಾವು ಚರ್ಚೆ ನಡೆಸಿದ್ದೇವೆ. ಮುಂದೆಯೂ ಚರ್ಚೆ ಮುಂದುವರೆಯಲಿದೆ. ಅಂತಿಮ ನಿರ್ಧಾರ ಕುರಿತು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ತಿಳಿಸಿದರು.
Advertisement