
ನವದೆಹಲಿ: ಅಪರಾಧ ಪ್ರಕರಣಗಳ ಆರೋಪಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ತೆರವು ಮಾಡುವ ಕಾರ್ಯಾಚರಣೆ ವಿಷಯದಲ್ಲಿ ಸೆ.17 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಗುಜರಾತ್ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುಜರಾತ್ ಅಧಿಕಾರಿಗಳ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗುಜರಾತ್ ಅಧಿಕಾರಿಗಳು ನ್ಯಾಯಾಂಗದ ಆದೇಶಕ್ಕೆ ವಿರುದ್ಧವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬುದು ಸ್ಪಷ್ಟವಾದರೆ ತೆರವುಗೊಳಿಸಲಾದ ಕಟ್ಟಡಗಳನ್ನು ಮರುಸ್ಥಾಪಿಸಲು ಆದೇಶ ನೀಡಲಾಗುತ್ತದೆ ಎಂದು ನ್ಯಾ.ಬಿಆರ್ ಗವಾಯಿ ಅವರಿದ್ದ ಪೀಠ ಹೇಳಿದೆ.
ಸೆ.17 ರ ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ದೇಶಾದ್ಯಂತ, ಯಾವುದೇ ಆರೋಪಿಗೆ ಸಂಬಂಧಿಸಿದ ಕಟ್ಟಡಗಳನ್ನು ತನ್ನ ಅನುಮತಿ ಇಲ್ಲದೇ ತೆರವುಗೊಳಿಸಬಾರದು ಎಂದು ಹೇಳಿತ್ತು.
ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ಗುಜರಾತ್‌ನ ಅಧಿಕಾರಿಗಳು ಕಟ್ಟಡಗಳನ್ನು ನೆಲಸಮ ಮಾಡಿದ್ದಾರೆ ಎಂದು ಅರ್ಜಿದಾರರಾದ ಸುಮ್ಮಸ್ತ್ ಪಟ್ನಿ ಮುಸ್ಲಿಂ ಜಮಾತ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ ವಾದಿಸಿದರು.
ಗುಜರಾತ್ ಅಧಿಕಾರಿಗಳ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ರಚನೆಗಳು ಸಮುದ್ರಕ್ಕೆ ತಾಗಿಕೊಂಡಿವೆ ಮತ್ತು ಸೋಮನಾಥ ದೇವಾಲಯದಿಂದ ಸುಮಾರು 340 ಮೀಟರ್ ದೂರದಲ್ಲಿವೆ ಎಂದು ಹೇಳಿದರು. "ಇದು ನ್ಯಾಯಾಲಯ ನೀಡಿರುವ ವಿನಾಯಿತಿಯ ವ್ಯಾಪ್ತಿಯೊಳಗೆ ಬರುತ್ತದೆ" ಎಂದು ಸಾಲಿಸಿಟರ್ ಜನರಲ್ ಹೇಳಿದ್ದಾರೆ.
Advertisement