ನವದೆಹಲಿ: ರೆಸ್ಲರ್ ವಿನೇಶ್ ಫೋಗಟ್ ನನ್ನ ತಂದೆಯ ಸಹಾಯವನ್ನು ಮರೆತಿದ್ದಾರೆ ಎಂದು ಸಹೋದರಿ ಬಬಿತಾ ಫೋಗಟ್ ಬೇಸರ ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದ ಬಳಿಕ ಇದೀಗ ರಾಜಕೀಯದಲ್ಲಿ ತಲ್ಲೀನರಾಗಿರುವ ಭಾರತದ ರೆಸ್ಲರ್ ವಿನೇಶ್ ಫೋಗಟ್ ವಿರುದ್ಧ ಆಕೆಯ ಸಹೋದರಿ ಬಬಿತಾ ಫೋಗಟ್ ಆಕ್ರೋಶ ವ್ಯಕ್ತಪಡಿಸಿದ್ದು, ಆಕೆಯನ್ನು ಕುಸ್ತಿಪಟುವಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ತಮ್ಮ ತಂದೆ ಮಹಾವೀರ್ ಸಿಂಗ್ ಅವರನ್ನೇ ವಿನೇಶ್ ಮರೆತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿನೇಶ್ ಫೋಗಾಟ್ ಗಾಗಿ ನನ್ನ ತಂದೆ ಮಹಾವೀರ್ ಫೋಗಟ್ ಬಹಳಷ್ಟು ಶ್ರಮಿಸಿದ್ದಾರೆ, ಸಹಾಯ ಮಾಡಿದ್ದಾರೆ. ಆದರೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ತಾನು ಅನರ್ಹಗೊಂಡ ಸಂದರ್ಭದ ವೇಳೆ, ತನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ ಪತ್ರ ಬರೆಯುವಾಗ ವಿನೇಶ್, ನನ್ನ ತಂದೆಯನ್ನು ಮರೆತಿದ್ದರು ಎಂದು ವಿನೇಶ್ ಅವರ ಸಹೋದರಿ ಬಬಿತಾ ಫೋಗಾಟ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಬಿತಾ ಫೋಗಾಟ್, ನನ್ನ ತಂದೆ ಮಹಾವೀರ್ ತನ್ನ ಬದುಕಿನಲ್ಲಿ 3 ಬಾರಿ ಮಾತ್ರ ಅತ್ತಿದ್ದು. ಮೊದಲನೆಯದ್ದು ನಾನೂ ಮತ್ತು ನನ್ನ ಸಹೋದರಿಯರು ಮದುವೆಯಾದಾಗ, ಎರಡನೆಯದು ನನ್ನ ಆಂಕಲ್ (ವಿನೇಶ್ ತಂದೆ) ಸತ್ತಾಗ, ಮೂರನೆಯದು ಪ್ಯಾರಿಸ್ ನಲ್ಲಿ ವಿನೇಶ್ ಅನರ್ಹಗೊಂಡಾಗ ಎಂದಿದ್ದಾರೆ.
“ನನ್ನ ಚಿಕ್ಕಪ್ಪ ತೀರಿಕೊಂಡಾಗ, ವಿನೇಶ್ ಮತ್ತು ಅವಳ ಇಬ್ಬರು ಒಡಹುಟ್ಟಿದವರು ಇದ್ದಕ್ಕಿದ್ದಂತೆ ಕುಸ್ತಿಯನ್ನು ತೊರೆದರು. ನನ್ನ ತಂದೆ ಅವರ ಮನೆಗೆ ಹೋಗಿ ಅವರನ್ನು ಮತ್ತೆ ಕುಸ್ತಿಗೆ ತರಲು ಅವರ ತಾಯಿ ಜೊತೆ ಸಾಕಷ್ಟು ಸಂಧಾನ ನಡೆಸಿದರು. ವಿನೇಶ್‌ಳನ್ನು ಉತ್ತಮ ರೆಸ್ಲರ್ ಆಗಿ ಮಾಡಲು ಅವರು ಸಾಕಷ್ಟು ಶ್ರಮ ವಹಿಸಿದರು. ಆದರೆ ಅಂತಹ ನನ್ನ ತಂದೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮತ್ತು ಕುಸ್ತಿ ತರಬೇತುದಾರರಾಗಿದ್ದ ಮಹಾವೀರ್ ಸಿಂಗ್ ರನ್ನೇ ವಿನೇಶ್ ಮರೆತು ಎಲ್ಲರಿಗೂ ಧನ್ಯವಾದ ಹೇಳಿದರು ಎಂದು ಬಬಿತಾ ಹೇಳಿದ್ದಾರೆ.
Advertisement