
ಕೋಲ್ಕತಾ: ಮಹಿಳಾ ಡಾಕ್ಟರ್ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ಆಮರಣಾಂತ ಉಪವಾಸ ಕೈಗೊಂಡಿರುವ ಕಿರಿಯ ವೈದ್ಯರಿಗೆ ಬೆಂಬಲ ವ್ಯಕ್ತಪಡಿಸಿ ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸುಮಾರು 50 ಹಿರಿಯ ವೈದ್ಯರು ರಾಜೀನಾಮೆ ನೀಡಿದ್ದಾರೆ.
ಇಂದು ಬೆಳಗ್ಗೆ ಆಸ್ಪತ್ರೆಯ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲಾ 50 ಹಿರಿಯ ವೈದ್ಯರು ತಮ್ಮ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಒಂದು ಕಾರಣಕ್ಕಾಗಿ ಹೋರಾಡುತ್ತಿರುವ ಯುವ ವೈದ್ಯರಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಹಿರಿಯ ವೈದ್ಯರೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
NRS ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ವೈದ್ಯರು ಸಹ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿನ ತಮ್ಮ ಸಹೋದ್ಯೋಗಿಗಳಂತೆ ಕ್ರಮ ಕೈಗೊಳ್ಳಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಆರ್ ಜಿ ಕಾರ್ ಆಸ್ಪತ್ರೆಯ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ನ್ಯಾಯ ಮತ್ತು ಭ್ರಷ್ಟಾಚಾರ ಪೀಡಿತ ಆರೋಗ್ಯ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುತ್ತಿರುವ ಕಿರಿಯ ವೈದ್ಯರೊಂದಿಗೆ ಪಶ್ಚಿಮ ಬಂಗಾಳದ ವೈದ್ಯರ ಜಂಟಿ ವೇದಿಕೆ ಒಗ್ಗಟ್ಟಿನ ಪ್ರತಿಜ್ಞೆ ಮಾಡಿದೆ. ಕಳೆದ ನಾಲ್ಕು ದಿನಗಳಿಂದ ಕಿರಿಯ ವೈದ್ಯರು ತಮ್ಮ ಬೇಡಿಕೆಗಳಿಗೆ ಧ್ವನಿಗೂಡಿಸಿ ಆಮರಣ ಉಪವಾಸ ನಡೆಸುತ್ತಿದ್ದರೂ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.
Advertisement