
ನವದೆಹಲಿ: ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಬೆನ್ನಲ್ಲೇ ಚುನಾವಣಾ ಫಲಿತಾಂಶದ ಕುರಿತು ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ, ಚುನಾವಣಾ ಫಲಿತಾಂಶ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.
ಹರ್ಯಾಣದ ಕೆಲವು ಜಿಲ್ಲೆಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮತ್ತು ಇವಿಎಂಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ "ಗಂಭೀರ ಸಮಸ್ಯೆಗಳು" ಇರುವುದರಿಂದ ಹರ್ಯಾಣ ವಿಧಾನಸಭಾ ಚುನಾವಣೆಯ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.
ಅಲ್ಲದೆ ಚುನಾವಣಾ ಫಲಿತಾಂಶದಲ್ಲಿ ಬಹುದೊಡ್ಡ ಪಿತೂರಿ ನಡೆದಿದ್ದು, ಪ್ರಜಾಪ್ರಭುತ್ವವು ಸೋತಿದ್ದು, ಹಿತಾಸಕ್ತಿಗಳು ಗೆದ್ದಿದೆ. ಹೀಗಾಗಿ ತಾನು ಈ ವಿಷಯವನ್ನು ಚುನಾವಣಾ ಆಯೋಗಕ್ಕೆ ತೆಗೆದುಕೊಂಡು ಹೋಗುವುದಾಗಿ ಕಾಂಗ್ರೆಸ್ ಹೇಳಿದೆ.
ಹರ್ಯಾಣ ಚುನಾವಣಾ ಫಲಿತಾಂಶ ಬೆನ್ನಲ್ಲೇ ಇಂದು ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ನಮ್ಮ ಅಭ್ಯರ್ಥಿಗಳು ಕೆಲ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ನಾವು ಅದನ್ನು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಜೈರಾಮ್ ರಮೇಶ್, 'ಹರ್ಯಾಣ ಚುನಾವಣಾ ಫಲಿತಾಂಶಗಳು "ಸಂಪೂರ್ಣವಾಗಿ ಅನಿರೀಕ್ಷಿತ, ಸಂಪೂರ್ಣವಾಗಿ ಆಶ್ಚರ್ಯಕರ ಮತ್ತು ವಿರೋಧಾಭಾಸ ಎಂದು ಬಣ್ಣಿಸಿದ್ದಾರೆ. ಫಲಿತಾಂಶ ನೆಲದ ವಾಸ್ತವಕ್ಕೆ ವಿರುದ್ಧವಾಗಿ, ಹರಿಯಾಣದ ಜನರು ಬದಲಾವಣೆ ಮತ್ತು ಪರಿವರ್ತನೆಗಾಗಿ ತಮ್ಮ ಮನಸ್ಸು ಮಾಡಿದ್ದಕ್ಕೆ ವಿರುದ್ಧವಾಗಿ ಬಂದಿದೆ. ಹರ್ಯಾಣದಲ್ಲಿ ನಾವು ಇಂದು ಕಂಡಿರುವುದು ಕುಶಲತೆಯ ಮತ್ತು ಜನರ ಇಚ್ಛೆಯನ್ನು ಬುಡಮೇಲು ಮಾಡುವ ವಿಜಯವಾಗಿದೆ. ಇದು ಪಾರದರ್ಶಕ, ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಸೋಲು ಎಂದು ಹೇಳಿದ್ದಾರೆ.
ದೋಷಪೂರಿತ ಇವಿಎಂಗಳು
ಇದೇ ವೇಳೆ ಮಾತನಾಡಿದ ಪವನ್ ಖೇರಾ, 'ಹಿಸಾರ್, ಮಹೇಂದ್ರಗಢ ಮತ್ತು ಪಾಣಿಪತ್‌ನಲ್ಲಿ ದೂರುಗಳು ಬಂದಿದ್ದು, ಶೇ.99 ಬ್ಯಾಟರಿ ಇರುವ ಎಲೆಕ್ಟ್ರಾನಿಕ್ ಮತಯಂತ್ರಗಳು (ಇವಿಎಂ) ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಶೇ.60-70ರಷ್ಟು ಬ್ಯಾಟರಿ ಹೊಂದಿರುವ ಇವಿಎಂ ಬಳಕೆ ಮಾಡಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಇದು ಅನುಮಾನ ಮಾಡಿಸುವುದಿಲ್ಲವೇ.. ಈ ಪಿತೂರಿ ನಿಮಗೆ ಅರ್ಥವಾಗಿದೆಯೇ? ಸದ್ಯಕ್ಕೆ 12ರಿಂದ 14 ಸ್ಥಾನಗಳ ಕ್ಷೇತ್ರಗಳಿಂದ ದೂರುಗಳು ಬಂದಿವೆ ಎಂದು ಹೇಳಿದರು.
"ಮಧ್ಯಾಹ್ನವೆಲ್ಲಾ ನಾನು ಚುನಾವಣಾ ಆಯೋಗದೊಂದಿಗೆ ಸಂಪರ್ಕದಲ್ಲಿದ್ದೆ. ಆಯೋಗವು ನನ್ನ ದೂರುಗಳಿಗೆ ಉತ್ತರ ನೀಡಿದೆ. ಚುನಾವಣಾ ಆಯೋಗದ ಉತ್ತರಕ್ಕೆ ನಾನು ಉತ್ತರಿಸಿದ್ದೇನೆ. ಎಣಿಕೆ ಪ್ರಕ್ರಿಯೆ, ಇವಿಎಂಗಳ ಕಾರ್ಯನಿರ್ವಹಣೆಯ ಬಗ್ಗೆ ನಮಗೆ ಅತ್ಯಂತ ಗಂಭೀರವಾದ ದೂರುಗಳು ಬಂದಿವೆ. ಕನಿಷ್ಠ ಮೂರು ಜಿಲ್ಲೆಗಳಲ್ಲಿ ದೂರು ಬಂದಿದ್ದು ಇನ್ನೂ ಹೆಚ್ಚಿನ ಕ್ಷೇತ್ರಗಳಿಂದ ದೂರುಗಳು ಬರುತ್ತಿವೆ.
ನಾವು ಹರಿಯಾಣದಲ್ಲಿರುವ ನಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದೇವೆ ಮತ್ತು ಈ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ನಾಳೆ ಅಥವಾ ಮರುದಿನ ಚುನಾವಣಾ ಆಯೋಗಕ್ಕೆ ಇದನ್ನು ಏಕೀಕೃತ ರೂಪದಲ್ಲಿ ಪ್ರಸ್ತುತಪಡಿಸಲಿದ್ದೇವೆ. ನಾವು ಅವರಿಂದ ಸಮಯ ಕೇಳುತ್ತೇವೆ.. ವಿವರವಾದ ವರದಿ ನೀಡಿ ದೂರು ಸಲ್ಲಿಸುತ್ತೇವೆ. ಹೀಗಾಗಿ ಇಂದು ಪ್ರಕಟವಾಗಿರುವ ಫಲಿತಾಂಶವನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ರಮೇಶ್ ಹೇಳಿದರು.
ನಮ್ಮ ಗೆಲುವನ್ನು ಕಸಿದುಕೊಂಡಿದ್ದಾರೆ
ಕಾಂಗ್ರೆಸ್ ಪಕ್ಷವು ಫಲಿತಾಂಶಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲಿದ್ದು, ಸಮಿತಿಯನ್ನು ಸಹ ರಚಿಸಲಾಗುವುದು. ನಾವು ಎಲ್ಲರೊಂದಿಗೂ ಮಾತನಾಡುತ್ತೇವೆ. ಆದರೆ ಇದು ವಿಶ್ಲೇಷಣೆಯ ಸಮಯವಲ್ಲ, ಮುಖ್ಯ ವಿಷಯವೆಂದರೆ ನಮ್ಮಿಂದ ವಿಜಯವನ್ನು ಕಸಿದುಕೊಳ್ಳಲಾಗಿದೆ. ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಚುನಾವಣಾ ಆಯೋಗ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಯಾಗಿದ್ದು, ಇದು ಸಾಂವಿಧಾನಿಕವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಕೊನೆಯ ಹಂತದವರೆಗೂ ಮುನ್ನಡೆಯಲ್ಲಿದ್ದವರು ಕೇವಲ 200, 300, 50 ಮತಗಳ ಅಂತರದಲ್ಲಿ ಸೋತಿದ್ದಾರೆ. ಇದು ಇವಿಎಂಗಳ ಬಗ್ಗೆ ಅನುಮಾನ ಮೂಡುವಂತೆ ಮಾಡುತ್ತಿದೆ ಎಂದು ಜೈರಾಮ್ ರಮೇಶ್ ಹೇಳಿದರು.
Advertisement