ಶ್ರೀನಗರ: ಆರ್ಟಿಕಲ್ 370 ರದ್ಧತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟಬಹುಮತ ಪಡೆದಿದ್ದು, ಇದರ ಬೆನ್ನಲ್ಲೇ ಭಾವಿ ಸಿಎಂ ಎಂದೇ ಹೇಳಲಾಗುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರ ವಿಧಾನಸಭೆ ಮತ ಎಣಿಕೆಯಲ್ಲಿನ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟ ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಗೆ ಸಿದ್ಧವಾಗುತ್ತಿದೆ.
ಈ ನಡುವೆ ಗೆಲುವಿನ ಸಂಭ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ತಮ್ಮ ವಿರೋಧಿಗಳ ವಿರುದ್ಧ ಕಿಡಿಕಾರಿದ್ದಾರೆ.
ಪ್ರಮುಖವಾಗಿ ಬಿಜೆಪಿ ಪಕ್ಷವನ್ನು ಕೇಂದ್ರವಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ ಒಮರ್ ಅಬ್ದುಲ್ಲಾ, 'ನ್ಯಾಷನಲ್ ಕಾನ್ಫರೆನ್ಸ್ ಗೆ ಗೆಲುವು ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದಕ್ಕಾಗಿ ನಾವು ಮತದಾರರಿಗೆ ಕೃತಜ್ಞರಾಗಿರುತ್ತೇವೆ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನರು ನಮ್ಮನ್ನು ಬೆಂಬಲಿಸಿದ್ದಾರೆ. ನಾವು ಈ ಮತಗಳಿಗೆ ಯೋಗ್ಯರು ಎಂಬುದನ್ನು ಸಾಬೀತುಪಡಿಸುವ ನಮ್ಮ ಪ್ರಯತ್ನಗಳು ಈಗ ಆಗಲಿವೆ" ಎಂದು ಹೇಳಿದರು.
ಅಂತೆಯೇ ಕಳೆದ ಐದು ವರ್ಷಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸಲು ನಮ್ಮ ವಿರೋಧಿ ಸ್ಪರ್ಧಿಗಳು ಪ್ರಯತ್ನಿಸಿದ್ದಾರೆ. ಕಳೆದ ಐದು ವರ್ಷಗಳಿಂದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸಲು ಇತರ ರಾಜಕೀಯ ಪಕ್ಷಗಳು ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ನಮ್ಮನ್ನು ಮುಗಿಸಲು ಪ್ರಯತ್ನಿಸಿದವರು ಇಂದು ಸೋಲು ಕಂಡಿದ್ದಾರೆ. ಈ ತೀರ್ಪು ಪಕ್ಷದ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಪ್ರಜೆಗಳ ಆಶೋತ್ತರಕ್ಕೆ ಬದ್ಧರಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.
'ಮೋದಿ ಮಾತನ್ನು ನಂಬುತ್ತೇನೆ'
ಇದೇ ವೇಳೆ ಕೇಂದ್ರದ ಮೋದಿ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಈ ಹಿಂದೆ ಇದ್ದ ರಾಜ್ಯ ಸ್ಥಾನಮಾನ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ ಒಮರ್ ಅಬ್ದುಲ್ಲಾ, 'ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ನಾವು ರಾಜ್ಯತ್ವವನ್ನು ಮರುಸ್ಥಾಪಿಸುತ್ತೇವೆ ಎಂದು ಸಾರ್ವಜನಿಕವಾಗಿ ಹೇಳಿದ್ದರು.
ನಾನು ಅವರ ಮಾತನ್ನು ನಂಬಲು ಬಯಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಮರುಸ್ಥಾಪಿಸುತ್ತೇವೆ ಎಂದು ಅವರು ಹೇಳಿಲ್ಲ. ಹೀಗಾಗಿ ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲೇಬೇಕು ಎಂದು ಒಮರ್ ಅಬ್ದುಲ್ಲಾ ಒತ್ತಾಯಿಸಿದರು.
ಇದೇ ವೇಳೆ ಮೈತ್ರಿ ವಿಚಾರವಾಗಿ ಪಿಡಿಪಿ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ, 'ಜನರ ನಿರೀಕ್ಷೆಗೆ ತಕ್ಕಂತೆ ನಿಲ್ಲುವುದು ಮತ್ತು ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುವುದು ಎನ್‌ಸಿ-ಸಿಪಿಎಂ-ಕಾಂಗ್ರೆಸ್ ಮೈತ್ರಿಯ ಜವಾಬ್ದಾರಿಯಾಗಿದೆ. ಕೇಂದ್ರ ಸರ್ಕಾರದೊಂದಿಗೆ ಸಂಬಂಧವನ್ನು ಬೆಳೆಸುವುದು ನಮಗೆ ಈಗ ಅತ್ಯಗತ್ಯವಾಗಿದೆ. ಇದರಿಂದ ನಾವು ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗಳನ್ನು ಪರಿಹರಿಸಬಹುದು.
ಈ ಚುನಾವಣೆಯಲ್ಲಿ ಗಂದರ್‌ಬಾಲ್ ಮತ್ತು ಬುದ್ಗಾಮ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಒಮರ್ ಅಬ್ದುಲ್ಲಾ ಎರಡೂ ಕ್ಷೇತ್ರಗಳಲ್ಲಿ ಭಾರಿ ಅಂತರದಿಂದ ಜಯಭೇರಿ ಭಾರಿಸಿದ್ದಾರೆ. ಗಂದರ್‌ಬಾಲ್ ನಲ್ಲಿ 10 ಸಾವಿರ ಮತಗಳ ಅಂತರದಿಂದ ಮತ್ತು ಬದ್ಗಾಮ್ ನಲ್ಲಿ 18 ಸಾವಿರ ಮತಗಳ ಅಂತರದಿಂದ ಪಿಡಿಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.
Advertisement