ಹರಿಯಾಣದಲ್ಲಿ ಕಾಂಗ್ರೆಸ್ ಮತಗಳ ವಿಭಜನೆ, ಇಂಡಿಯಾ ಮೈತ್ರಿಗೆ ದ್ರೋಹ: AAP ವಿರುದ್ಧ ಸ್ವಾತಿ ಮಲಿವಾಲ್ ವಾಗ್ದಾಳಿ
ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿದ್ದು, INDIA ಮೈತ್ರಿಕೂಟಕ್ಕೆ ದ್ರೋಹ ಬಗೆದಿದೆ ಎಂದು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಹಾಳು ಮಾಡುವ ಏಕೈಕ ಉದ್ದೇಶದಿಂದ AAP ಹರಿಯಾಣ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಇದು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಬಗೆದ ದ್ರೋಹ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮಲಿವಾಲ್, ಎಎಪಿ ನನ್ನನ್ನು ಬಿಜೆಪಿ ಏಜೆಂಟ್ ಎಂದು ಸುಳ್ಳು ಆರೋಪ ಮಾಡಿತ್ತು. ಇಂದು ಅದು ಸ್ವತಃ ಇಂಡಿಯಾ ಮೈತ್ರಿಕೂಟಕ್ಕೆ ದ್ರೋಹ ಮಾಡುತ್ತಿದೆ ಮತ್ತು ಕಾಂಗ್ರೆಸ್ ಮತಗಳನ್ನು ವಿಭಜಿಸುತ್ತಿದೆ! ಬಿಜೆಪಿ ಸೋಲಿಸುವ ಬದಲು ಕಾಂಗ್ರೆಸ್‌ಗೆ ಹಾನಿ ಮಾಡುವ ಏಕೈಕ ಉದ್ದೇಶದಿಂದ ವಿನೇಶ್ ಫೋಗಟ್ ಅವರಂತಹ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿನೇಶ್ ಫೋಗಟ್ ಅವರನ್ನು ಸೋಲಿಸಲು AAP ಅಭ್ಯರ್ಥಿಯನ್ನು ನಿಲ್ಲಿಸಲಾಗಿದೆ. ತವರು ರಾಜ್ಯದಲ್ಲಿ ಠೇವಣಿ ಉಳಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಏಕೆ ತಲುಪಿದೆ? ಇನ್ನೂ ಸಮಯವಿದೆ, ನಿಮ್ಮ ಅಹಂಕಾರವನ್ನು ಬಿಟ್ಟುಬಿಡಿ, ಜನರಿಗಾಗಿ ಕೆಲಸ ಮಾಡಿ ಎಂದಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 39.24 ಮತಗಳ ಹಂಚಿಕೆಯೊಂದಿಗೆ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ನ ಶೇ. 40.25ಕ್ಕೆ ಹೋಲಿಸಿದರೆ, ಎಎಪಿ ಕೇವಲ ಶೇ. 1.54 ರಷ್ಟು ಮತಗಳನ್ನು ಪಡೆದಿದೆ ಎನ್ನುವ ಆರಂಭಿಕ ಚುನಾವಣಾ ಫಲಿತಾಂಶದ ನಡುವೆ ಮಲಿವಾಲ್ ಪೋಸ್ಟ್ ಮಾಡಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯ ಆರಂಭಿಕ ಟ್ರೆಂಡ್‌ಗಳು ರೋಚಕವಾಗಿ ಹೊರಹೊಮ್ಮಿದ್ದು, ಬಿಜೆಪಿ ಬಹುಮತದತ್ತ ಸಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ