
ನವದೆಹಲಿ: ಭಾರೀ ಕುತೂಹಲ ಮೂಡಿಸಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆಯ ಚುನಾವಣಾ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಕುರಿತು ಸ್ಪಷ್ಟ ಚಿತ್ರಣಗಳು ಲಭ್ಯವಾಗುವ ನಿರೀಕ್ಷೆಗಳಿವೆ.
ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್'ಗೆ ಸ್ಪಷ್ಟ ಬಹುಮತ ಮತ್ತು ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟಕ್ಕೆ ಮುನ್ನಡೆ ಇಲ್ಲವೇ ಸರಳ ಬಹುಮತದ ಸುಳಿವು ನೀಡಿದೆ.
ಒಂದು ವೇಳೆ ಸಮೀಕ್ಷಾ ವರದಿಗಳು ನಿಜವಾಗಿದ್ದೇ ಆದರೆ, ಹರಿಯಾಣದಲ್ಲಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಹಾಗೂ ರಾಜ್ಯದಲ್ಲಿ ಬೇರೂರುವ ಯತ್ನದಲ್ಲಿದ್ದ ಆ್ಯಪ್'ಗೆ ಭಾರೀ ಹೊಡೆತ ಬೀಳಸಿದೆ. ಮತ್ತೊಂದೆಡೆ ದಶಕದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಲಿದೆ. ಹರಿಯಾಣ ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 5ರಂದು ಮತದಾನ ನಡೆದಿದ್ದು, 1,031 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶೇಕಡಾ 67.90ರಷ್ಟು ಮತದಾನವಾಗಿತ್ತು.
ಇನ್ನು ಜಮ್ಮು ಕಾಶ್ಮೀರದಲ್ಲಿ 10 ವರ್ಷಗಳ ಬಳಿಕ, ಆರ್ಟಿಕಲ್ 370 ರದ್ದಾದ ಬಳಿಕ ಮೊದಲ ವಿಧಾನಸಭಾ ಚುನಾವಣೆ ನಡೆದಿದ್ದು, ಗೆಲ್ಲೋದು ಯಾರು? ಎಂಬುದರ ಕುರಿತು ಕುತೂಹಲಗಳು ಮೂಡಿವೆ. ಮತ ಎಣಿಕೆ ಹಿನ್ನೆಲೆ ಚುನಾವಣೆ ಕೇಂದ್ರಗಳ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ರೂ, ಇಂಡಿಯಾ ಮೈತ್ರಿ ಕೂಟ ಮತ್ತು ಬಿಜೆಪಿ ಮಾತ್ರ ತಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿವೆ. ಮತ್ತೊಂದು ಕಡೆ, ಇಂಡಿಯಾ ಕೂಟ, ಮೆಹಬೂಬಾ ಮುಫ್ತಿ ಬೆಂಬಲದ ನಿರೀಕ್ಷೆಯಲ್ಲಿದೆ.
ಜಮ್ಮು-ಕಾಶ್ಮೀರದ 90 ವಿಧಾನಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 18ರಿಂದ ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡರೆ, ಬಿಜೆಪಿ ಮತ್ತು ಪಿಡಿಪಿ ಏಕಾಂಗಿಯಾಗಿ ಅಖಾಡದಲ್ಲಿವೆ.
Advertisement