
ಚಂಡೀಗಢ: ಇತ್ತೀಚಿಗೆ ನಡೆದ ಹರಿಯಾಣ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಇಬ್ಬರು ಪಕ್ಷೇತರ ಶಾಸಕರಾದ ದೇವೇಂದ್ರ ಕಾಡ್ಯಾನ್ ಮತ್ತು ರಾಜೇಶ್ ಜೂನ್ ಅವರು ಬುಧವಾರ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ.
ರಾಜೇಶ್ ಜೂನ್ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದು, ಬಿಜೆಪಿ ಟಿಕೆಟ್ ವಂಚಿತ ದೇವೇಂದ್ರ ಕಾಡ್ಯನ್ ಸಹ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಕಾಡ್ಯನ್ ಸೋನಿಪತ್‌ನ ಗನೌರ್ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕುಲದೀಪ್ ಶರ್ಮಾ ಅವರ ವಿರುದ್ಧ 35,209 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇನ್ನು ಜೂನ್ ಅವರು ಝಜ್ಜರ್ ಜಿಲ್ಲೆಯ ಬಹದ್ದೂರ್‌ಗಢ ಕ್ಷೇತ್ರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ದಿನೇಶ್ ಕೌಶಿಕ್ ಅವರನ್ನು ಸೋಲಿಸಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಒಟ್ಟು ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನೊಬ್ಬರು ಹಿಸಾರ್‌ನಿಂದ ಬಿಜೆಪಿ ನಾಯಕ ನವೀನ್ ಜಿಂದಾಲ್ ಅವರ ತಾಯಿ ಸಾವಿತ್ರಿ ಜಿಂದಾಲ್.
ಬಿಜೆಪಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಕಾಡ್ಯನ್ ಮತ್ತು ಜೂನ್ ಅವರು ಸರ್ಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಹರಿಯಾಣ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಅವರು ಬುಧವಾರ ಹೇಳಿದ್ದಾರೆ.
Advertisement