ಹೈದರಾಬಾದ್: ಬಿಜೆಪಿಯನ್ನು ಸೋಲಿಸಬೇಕಾದರೆ ಕಾಂಗ್ರೆಸ್ ಎಲ್ಲರನ್ನೂ ಜೊತೆಗೆ ಕರೆದೊಯ್ಯಬೇಕು ಎಂದು ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶುಕ್ರವಾರ ಹೇಳಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅನಿರೀಕ್ಷಿತ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ತಮ್ಮ ಪಕ್ಷ ಅಲ್ಲಿ ಸ್ಪರ್ಧಿಸಿದ್ದರೆ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮತಗಳ ವಿಭಜನೆಗೆ ತಾವೇ ಕಾರಣ ಎಂದು ಜಾತ್ಯತೀತ ಪಕ್ಷಗಳು ದೂಷಿಸುತ್ತಿದ್ದವು ಎಂದರು.
ಶುಕ್ರವಾರ ರಾತ್ರಿ ತೆಲಂಗಾಣದ ವಿಕಾರಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಹರಿಯಾಣದಲ್ಲಿ ಬಿಜೆಪಿ ಹೇಗೆ ಗೆದ್ದರು? ನಾನು ಅಲ್ಲಿ ಇರಲಿಲ್ಲ. ಇಲ್ಲದಿದ್ದರೆ ‘ಬಿ ಟೀಂ’ ಎನ್ನುತ್ತಿದ್ದರು. ಅಲ್ಲಿ ಸೋತಿದ್ದಾರೆ. ಈಗ, ನೀವು ಹೇಳಿ, ಅವರು ಯಾರಿಂದಾಗಿ ಸೋತರು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಹೇಳಲು ಬಯಸುತ್ತೇನೆ. ನಾನು ಹೇಳುತ್ತಿರುವುದನ್ನು ಅರ್ಥಮಾಡಿಕೊಳ್ಳಿ. ಮೋದಿಯನ್ನು ಸೋಲಿಸಲು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಬೇಕು. ಏಕಾಂಗಿಯಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಹರಿಯಾಣದಲ್ಲಿ ಬಿಜೆಪಿ ಅದ್ಭುತ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಆಡಳಿತ ವಿರೋಧಿ ಮತ್ತು ಕಾಂಗ್ರೆಸ್ ಪುನರಾಗಮನದ ಭರವಸೆಯನ್ನು ನುಚ್ಚುನೂರು ಮಾಡಿದೆ. 90 ವಿಧಾನಸಭಾ ಸ್ಥಾನಗಳಲ್ಲಿ ಕೇಸರಿ ಪಕ್ಷ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ.
Advertisement