
ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತರು ತಾವು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗ್ಯಾಂಗ್ ಹತ್ಯೆಯ ಹೊಣೆಯನ್ನು ಇನ್ನೂ ಒಪ್ಪಿಕೊಳ್ಳದಿರುವಾಗ ಪೊಲೀಸರು ಈ ಹೇಳಿಕೆಯನ್ನು ಅಧಿಕೃತಗೊಳಿಸಿಲ್ಲ.
NCP ಅಜಿತ್ ಪವಾರ್ ಬಣದ ಪ್ರಮುಖ ರಾಜಕಾರಣಿ ಮತ್ತು ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ದಿಕಿ (66) ಅವರನ್ನು ನಿನ್ನೆ ರಾತ್ರಿ ಬಾಂದ್ರಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರ ಮಗನ ಕಚೇರಿ ಬಳಿ ಸಿದ್ದಿಕ್ ಮೇಲೆ ಆರು ಗುಂಡುಗಳನ್ನು ಹಾರಿಸಲಾಗಿದೆ. ಇದು ಸುಪಾರಿ ಹತ್ಯೆ ಎಂದು ಶಂಕಿಸಿರುವ ಪೊಲೀಸರು ಪ್ರಕರಣದ ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಗುಂಡಿನ ದಾಳಿ ಸಂಬಂಧ ಹರ್ಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಮೂರನೆಯವರು ಪರಾರಿಯಾಗಿದ್ದಾರೆ. ಆದಾಗ್ಯೂ, ಸಿದ್ದಿಕಿ ಇದ್ದ ಸ್ಥಳದ ಬಗ್ಗೆ ಬೇರೊಬ್ಬರು ಮಾಹಿತಿ ನೀಡಿರಬಹುದೆಂದು ಪೊಲೀಸರ ನಂಬಿಕೆಯಾಗಿದೆ.
ಗುಂಡಿನ ದಾಳಿಗೂ ಮುನ್ನಾ ಮೂವರು ಆರೋಪಿಗಳು ನಿನ್ನೆ ರಾತ್ರಿ ಆಟೋ ರಿಕ್ಷಾದಲ್ಲಿ ಬಂದಿದ್ದು, ಸ್ವಲ್ಪ ಸಮಯ ಕಾಯುತ್ತಿದ್ದರು ಎಂದು ಅಪರಾಧ ವಿಭಾಗದ ಮೂಲಗಳು ತಿಳಿಸಿವೆ. ಪೊಲೀಸರು ಎರಡು ಆಯಮಾಗಳಿಂದ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಒಂದು ಬಿಷ್ಣೋಯ್ ಗ್ಯಾಂಗ್ ಮತ್ತು ಇನ್ನೊಂದು ಸ್ಲಂ ಪುನರ್ವಸತಿ ಪ್ರಕರಣಕ್ಕೆ ಸಂಬಂಧಿಸಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಸಿದ್ದಿಕಿ ಆಪ್ತರಾಗಿದ್ದರಿಂದ ಹತ್ಯೆಯಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿರುವುದು ಬಲವಾಗಿದೆ. ಸಿದ್ದಿಕ್ ಅವರಿಗೆ 15 ದಿನಗಳ ಹಿಂದೆ ಜೀವ ಬೆದರಿಕೆ ಕರೆ ಬಂದಿದ್ದರಿಂದ ಅವರಿಗೆ ‘ವೈ’ ವರ್ಗದ ಭದ್ರತೆ ನೀಡಲಾಗಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ.
Advertisement