ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಗುಂಡಿಕ್ಕಿ ಹತ್ಯೆ: ವಿವಿಧ ಕೋನಗಳಿಂದ ಪೊಲೀಸ್ ತನಿಖೆ ಆರಂಭ

ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಉತ್ತರ ಪ್ರದೇಶ ಮತ್ತು ಹರಿಯಾಣ ಮೂಲದ ಇಬ್ಬರು ದಾಳಿಕೋರರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬ ಶಂಕಿತ ಆರೋಪಿ ಪರಾರಿಯಾಗಿದ್ದಾನೆ.
ಮುಂಬೈನಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಸ್ಥಳದಲ್ಲಿ ಫೋರೆನ್ಸಿಕ್ ತಂಡವು ತನಿಖೆ ನಡೆಸುತ್ತಿದೆ.
ಮುಂಬೈನಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಸ್ಥಳದಲ್ಲಿ ಫೋರೆನ್ಸಿಕ್ ತಂಡವು ತನಿಖೆ ನಡೆಸುತ್ತಿದೆ.
Updated on

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಯ ಕುರಿತು ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ,ಸುಫಾರಿ ಹತ್ಯೆ, ಉದ್ಯಮ ವೈಷಮ್ಯ ಅಥವಾ ಕೊಳೆಗೇರಿ ಪುನರ್ವಸತಿ ಯೋಜನೆಗೆ ಸಂಬಂಧಿಸಿದಂತೆ ಬೆದರಿಕೆಯೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಮುಂಬೈನಲ್ಲಿ ನಿನ್ನೆ ಶನಿವಾರ ರಾತ್ರಿ ಮೂವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಎನ್‌ಸಿಪಿ ನಾಯಕ ಸಿದ್ದಿಕ್ (66ವ) ಅವರ ಮೃತದೇಹವನ್ನು ಲೀಲಾವತಿ ಆಸ್ಪತ್ರೆಯಿಂದ ಇಂದು ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ.

ಈ ಆಘಾತಕಾರಿ ಘಟನೆಯು ಮುಂದಿನ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರತಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ.

ಮುಂಬೈನ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿ ಬಾಬಾ ಸಿದ್ಧಿಕ್ ಅವರ ಪುತ್ರ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಭಾಗದಲ್ಲಿ ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಬಂದು ಗುಂಡು ಹಾರಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಸಿದ್ದಿಕಿ ಅವರನ್ನು ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಲೀಲಾವತಿ ಆಸ್ಪತ್ರೆಯ ತುರ್ತು ವೈದ್ಯಕೀಯ ಸೇವೆಗಳಿಗೆ ಸ್ಥಳಾಂತರಿಸಲಾಯಿತು.

ಅರ್ಧ ಗಂಟೆಗೂ ಹೆಚ್ಚು ಕಾಲ ಸ್ಪಂದಿಸದ ಸ್ಥಿತಿಯಲ್ಲಿ ಸಿದ್ದಿಕಿಯಿದ್ದರು. ಆಸ್ಪತ್ರೆಗೆ ಕರೆತಂದಾಗ ನಾಡಿಮಿಡಿತವಿಲ್ಲ, ಹೃದಯ ಚಟುವಟಿಕೆಯಿಲ್ಲ, ರಕ್ತದೊತ್ತಡವಿಲ್ಲ, ಎದೆ ಮೇಲೆ ಗುಂಡಿನ ಗಾಯವಾಗಿತ್ತು ಎಂದು ವೈದ್ಯರು ತಿಳಿಸಿದರು. ನಂತರ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು, ಅಲ್ಲಿ ಬದುಕುಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತಾದರೂ ಸಾಧ್ಯವಾಗಲಿಲ್ಲ. ಕೊನೆಗೆ ರಾತ್ರಿ 11:27 ಕ್ಕೆ ನಿಧನರಾದರು.

ಘಟನೆಯ ನಂತರ, ಫೋರೆನ್ಸಿಕ್ ತಂಡವು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ. ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಹತ್ತಿರದ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೂಟರ್‌ಗಳು 9.9 ಎಂಎಂ ಪಿಸ್ತೂಲ್‌ನಿಂದ ನಾಲ್ಕೈದು ಸುತ್ತು ಗುಂಡು ಹಾರಿಸಿದ್ದಾರೆ, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆಯ ಸಮಯದಲ್ಲಿ, ದುರ್ಗಾ ವಿಸರ್ಜನಾ ಮೆರವಣಿಗೆಯಲ್ಲಿ ಜನರು ಪಟಾಕಿಗಳನ್ನು ಸಿಡಿಸಲು ಪ್ರಾರಂಭಿಸಿದಾಗ ದಾಳಿಕೋರರು ಸಿದ್ದಿಕ್ ಮೇಲೆ ಗುಂಡು ಹಾರಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಜನರಿಗೆ ಗುಂಡಿನ ಸದ್ದು ಕೇಳದ ಕಾರಣ ಅದರ ಲಾಭವನ್ನು ದುಷ್ಕರ್ಮಿಗಳು ಆ ಸಂದರ್ಭದಲ್ಲಿ ಪಡೆದರು. ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಉತ್ತರ ಪ್ರದೇಶ ಮತ್ತು ಹರಿಯಾಣ ಮೂಲದ ಇಬ್ಬರು ದಾಳಿಕೋರರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬ ಶಂಕಿತ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಬಾ ಸಿದ್ದಿಕ್ ಬಾಂದ್ರಾ (ಪಶ್ಚಿಮ) ಕ್ಷೇತ್ರವನ್ನು ಮೂರು ಬಾರಿ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರು. ಮುಂಬೈನ ಪ್ರಮುಖ ಮುಸ್ಲಿಂ ನಾಯಕ, ಸಿದ್ದಿಕ್ ಹಲವಾರು ಬಾಲಿವುಡ್ ತಾರೆಗಳಿಗೆ ಹತ್ತಿರವಾಗಿದ್ದರು.

ತಮ್ಮ ಎಕ್ಸ್ ಖಾತೆಯಲ್ಲಿ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ದಾಳಿಯನ್ನು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ನನ್ನ ಉತ್ತಮ ಸ್ನೇಹಿತ ಮತ್ತು ಸಹೋದ್ಯೋಗಿಯನ್ನು ಕಳೆದುಕೊಂಡಿದ್ದೇನೆ ಎಂದಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಹೋರಾಡಿದ ಮತ್ತು ಜಾತ್ಯತೀತತೆಯನ್ನು ಪ್ರತಿಪಾದಿಸಿದ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ, ದಾಳಿಯ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್, ಇಬ್ಬರು ಶೂಟರ್‌ಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಇಂಡೆಂಟ್ ನಂತರ ಸುದ್ದಿಗಾರರಿಗೆ ತಿಳಿಸಿದರು.

ಅವರಲ್ಲಿ ಒಬ್ಬಾತ ಉತ್ತರ ಪ್ರದೇಶದವನಾಗಿದ್ದು, ಮತ್ತೊಬ್ಬ ಹರಿಯಾಣದವನು. ಮೂರನೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು. ಈ ಘಟನೆ ತೀವ್ರ ವಿಷಾದನೀಯ ಎಂದು ಶಿಂಧೆ ಹೇಳಿದ್ದಾರೆ.

ಮುಂಬೈನಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಸ್ಥಳದಲ್ಲಿ ಫೋರೆನ್ಸಿಕ್ ತಂಡವು ತನಿಖೆ ನಡೆಸುತ್ತಿದೆ.
ಬಾಬಾ ಸಿದ್ದಿಕಿ ಎದೆಗೆ ಎರಡು ಬಾರಿ ಗುಂಡೇಟು!

ಸಿದ್ದಿಕ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮುಂಬೈ ಪೊಲೀಸರ ಕರ್ತವ್ಯವಾಗಿದೆ. ಮೂರನೇ ಶಂಕಿತನನ್ನು ಬಂಧಿಸಲು ತಂಡಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಈ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲಾ ಮೂವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಮುಂಬೈನಲ್ಲಿ ಸುರಕ್ಷತೆ ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಶಿಂಧೆ ಜನರಿಗೆ ಭರವಸೆ ನೀಡಿದರು.

ಸಿದ್ದಿಕ್ ಹತ್ಯೆಯು ಕಳೆದ ಮೂರು ದಶಕಗಳಲ್ಲಿ ಮುಂಬೈನಲ್ಲಿ ನಡೆದ ಮೊದಲ ಉನ್ನತ ಮಟ್ಟದ ರಾಜಕೀಯ ಕೊಲೆಯಾಗಿದ್ದು, ಇದು ಚುನಾವಣೆಗೆ ಒಳಪಟ್ಟಿರುವ ಮಹಾರಾಷ್ಟ್ರವನ್ನು ಆಘಾತಕ್ಕೀಡು ಮಾಡಿದೆ. 90 ರ ದಶಕದ ಆರಂಭದಲ್ಲಿ, ಬಾಂದ್ರಾ ಮತ್ತು ಖೇತ್ವಾಡಿಯ ಬಿಜೆಪಿ ಶಾಸಕರಾಗಿದ್ದ ರಾಮದಾಸ್ ನಾಯಕ್ ಮತ್ತು ಪ್ರೇಮಕುಮಾರ್ ಶರ್ಮಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. 90ರ ದಶಕದಲ್ಲಿ ಮುಂಬೈನಲ್ಲಿ ಶಿವಸೇನೆಯ ಶಾಸಕರಾದ ವಿಠ್ಠಲ್ ಚವಾಣ್ ಮತ್ತು ರಮೇಶ್ ಮೋರೆ ಕೂಡ ಗುಂಡಿನ ದಾಳಿಗೆ ಒಳಗಾಗಿದ್ದರು.

ವಿದ್ಯಾರ್ಥಿ ದಿನಗಳಿಂದಲೂ ಕಾಂಗ್ರೆಸ್ಸಿಗರಾಗಿದ್ದ ಸಿದ್ದಿಕ್ ಈ ವರ್ಷದ ಫೆಬ್ರವರಿಯಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿಗೆ ಸೇರಲು ಹಳೆಯ ಪಕ್ಷವನ್ನು ತೊರೆದರು. ಮಾಜಿ ಸಚಿವರಿಗೆ ವೈ ಕೆಟಗರಿ ಭದ್ರತೆ ಇತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com