ಬಹ್ರೈಚ್: ದಸರಾ ಮುಗಿದು ದುರ್ಗೆಯ ವಿಗ್ರಹದ ವಿಸರ್ಜನೆ ಸಂದರ್ಭದಲ್ಲಿ ಉಂಟಾದ ಕೋಮು ಗಲಭೆ ವೇಳೆ 22 ವರ್ಷದ ಯುವಕ ಮೃತ್ಯುಪಟ್ಟ ನಂತರ ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.
ಬಹ್ರೈಚ್‌ನಲ್ಲಿ ಉದ್ವಿಗ್ನತೆ ಉಲ್ಬಣಗೊಂಡಿದ್ದರಿಂದ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು, ಸ್ಥಳದಲ್ಲಿ ಜನರು ಕೋಲು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಯುವಕನ ಹತ್ಯೆಗೆ ಸಂಬಂಧಿಸಿದಂತೆ ಮನ್ಸೂರ್ ಗ್ರಾಮದ ಮಹರಾಜ್‌ಗಂಜ್ ಪ್ರದೇಶದಲ್ಲಿ ಭಾನುವಾರ ದುರ್ಗಾ ವಿಗ್ರಹ ವಿಸರ್ಜನೆ ಮೆರವಣಿಗೆ ಸಾಗಿದಾಗ ಉಂಟಾದ ಅಶಾಂತಿಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 30 ಜನರನ್ನು ಬಂಧಿಸಿದ್ದಾರೆ.
ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯಲ್ಲಿ ಸುಮಾರು 6 ಮಂದಿ ಗಾಯಗೊಂಡಿದ್ದಾರೆ. ಹಲವಾರು ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದವು. ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು, ಪೊಲೀಸ್ ಪಡೆಗಳು ಪ್ರದೇಶದಲ್ಲಿ ಧ್ವಜ ಮೆರವಣಿಗೆಗಳನ್ನು ನಡೆಸಿದವು. ಕೆಲವು ಅಂಗಡಿಗಳು, ಮನೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಕಪ್ಪು ಹೊಗೆ ದಟ್ಟವಾಗಿ ಆವರಿಸಿದೆ.
ಗೃಹ ಕಾರ್ಯದರ್ಶಿ ಸಂಜೀವ್ ಗುಪ್ತಾ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಬ್ ಯಶ್ ಅವರು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಆಗಮಿಸಿದ್ದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದು ಬಹ್ರೈಚ್‌ನ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವೃಂದಾ ಶುಕ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಉತ್ತರ ಪ್ರದೇಶದ ಶಾಂತಿ ಮತ್ತು ಸಾಮರಸ್ಯವನ್ನು ಕದಡುವ ಯಾವುದೇ ಪಿತೂರಿ ನಡೆಯುವುದಿಲ್ಲ. ಗಲಭೆಕೋರರನ್ನು ರಕ್ಷಿಸುವವರು ಮತ್ತೊಮ್ಮೆ ಸಕ್ರಿಯರಾಗುತ್ತಿದ್ದಾರೆ, ನಾವು ಜಾಗರೂಕವಾಗಿರಬೇಕು. ರಾಜ್ಯದ ಉಜ್ವಲ ಭವಿಷ್ಯವನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಬರೆದಿದ್ದಾರೆ.
Advertisement