
ನವದೆಹಲಿ: ಇತ್ತೀಚಿಗೆ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚುತ್ತಿದ್ದು, ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಿಂದ ದಕ್ಷಿಣ ನಗರವಾದ ಬೆಂಗಳೂರಿಗೆ ಹಾರುತ್ತಿದ್ದ ಆಕಾಶ ಏರ್ ವಿಮಾನ "ಭದ್ರತಾ ಎಚ್ಚರಿಕೆ ಸ್ವೀಕರಿಸಿದೆ" ಮತ್ತು "ಮುನ್ನೆಚ್ಚರಿಕೆ" ಕ್ರಮವಾಗಿ ವಿಮಾನವನ್ನು ಹಿಂತಿರುಗಿಸಲು ಆದೇಶಿಸಲಾಯಿತು.
ತುರ್ತು ಪ್ರತಿಕ್ರಿಯೆ ತಂಡಗಳು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ವಿಮಾನ "ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಲು ಅಗತ್ಯವಿರುವ ಎಲ್ಲಾ ತುರ್ತು ಕಾರ್ಯವಿಧಾನಗಳನ್ನು" ಕ್ಯಾಪ್ಟನ್ ಅನುಸರಿಸಿದ್ದಾರೆ ಎಂದು ಆಕಾಶ ಏರ್ ಹೇಳಿದೆ.
ವಿಮಾನದಲ್ಲಿ ಮೂರು ಶಿಶುಗಳು ಸೇರಿದಂತೆ 184 ಜನರಿದ್ದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಮತ್ತೊಂದು ವಿಮಾನ, ಮುಂಬೈನಿಂದ ನವದೆಹಲಿಗೆ ಹಾರುತ್ತಿದ್ದ ದೇಶೀಯ ವಿಮಾನಯಾನ ಇಂಡಿಗೋ ಗುಜರಾತ್‌ನ ಅಹಮದಾಬಾದ್‌ಗೆ ತಿರುಗಿಸಲಾಗಿದೆ.
ಸರಣಿ ಬಾಂಬ್ ಬೆದರಿಕೆ ಬಗ್ಗೆ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ(BCAS)ನ ಮಹಾನಿರ್ದೇಶಕ ಜುಲ್ಫಿಕರ್ ಹಸನ್ ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಪ್ರತಿಕ್ರಿಯಿಸಿದ್ದು, ಭಾರತದ ವಿಮಾನಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ" ಮತ್ತು ಪೊಲೀಸರು ಅಪರಾಧಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
"ಈ ಬೆದರಿಕೆ ಸಂದೇಶಗಳ ಹಿಂದಿರುವ ಎಲ್ಲರನ್ನು ಪತ್ತೆಹಚ್ಚುವ ವಿಶ್ವಾಸವಿದೆ ಮತ್ತು ಅವರ ವಿರುದ್ಧ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹಸನ್ ತಿಳಿಸಿದ್ದಾರೆ.
ಸೋಮವಾರದಿಂದ ಇದುವರೆಗೆ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ 12 ಬಾಂಬ್ ಬೆದರಿಕೆಗಳು ಬಂದಿವೆ. ಇದರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬೆದರಿಕೆ ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ. ಈ ಎಲ್ಲವೂ ಹುಸಿ ಬಾಂಬ್ ಬೆದರಿಕೆಗಳು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.
Advertisement