ಭುಜ್: ಗುಜರಾತ್‌ನ ಕಚ್ ಜಿಲ್ಲೆಯ ಅಗ್ರೋಟೆಕ್ ಕಂಪನಿಯೊಂದರಲ್ಲಿ ಬುಧವಾರ ಬೆಳಗ್ಗೆ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಐವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕಾರ್ಮಿಕರು ಕಂಪನಿಯ ಕೊಳಚೆ ಸಂಸ್ಕರಣಾ ಘಟಕವನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಕಚ್(ಪೂರ್ವ) ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಬಾಗ್ಮಾರ್ ಅವರು ಹೇಳಿದ್ದಾರೆ.
"ಕೊಳಚೆ ಸಂಸ್ಕರಣಾ ಘಟಕ ಸ್ವಚ್ಛಗೊಳಿಸಲು ಕಾರ್ಮಿಕರೊಬ್ಬರು ಟ್ಯಾಂಕ್‌ಗೆ ಇಳಿದಾಗ ಅವರು ಉಸಿರುಗಟ್ಟಿ ಪ್ರಜ್ಞೆ ತಪ್ಪಿದ್ದಾರೆ. ಈ ವೇಳೆ ಇನ್ನಿಬ್ಬರು ಕಾರ್ಮಿಕರು ಆತನನ್ನು ರಕ್ಷಿಸಲು ಟ್ಯಾಂಕ್ ಒಳಗೆ ಇಳಿದಿದ್ದಾರೆ. ಆದರೆ ಅವರು ಸಹ ಮೂರ್ಛೆ ಹೋಗಿದ್ದಾರೆ. ಅವರನ್ನು ಅನುಸರಿಸಿ ಇನ್ನೂ ಇಬ್ಬರು ಟ್ಯಾಂಕ್ ಗೆ ಇಳಿದಿದ್ದು, ಎಲ್ಲಾ ಐವರು ಮೃತಪಟ್ಟಿದ್ದಾರೆ ಎಂದು” ಬಾಗ್ಮಾರ್ ತಿಳಿಸಿದ್ದಾರೆ.
ಈ ಸಂಬಂಧ ಕಾಂಡ್ಲಾ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಖಾದ್ಯ ತೈಲ ಮತ್ತು ಜೈವಿಕ ಡೀಸೆಲ್ ಉತ್ಪಾದನೆಯಲ್ಲಿ ತೊಡಗಿರುವ 'ಇಮಾಮಿ ಅಗ್ರೋಟೆಕ್' ಸಂಸ್ಥೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಕಾಂಡ್ಲಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಕಾರ್ಮಿಕರನ್ನು ಸಿದ್ಧಾರ್ಥ್ ತಿವಾರಿ, ಅಜ್ಮತ್ ಖಾನ್, ಆಶಿಶ್ ಗುಪ್ತಾ, ಆಶಿಶ್ ಕುಮಾರ್ ಮತ್ತು ಸಂಜಯ್ ಠಾಕೂರ್ ಎಂದು ಗುರುತಿಸಲಾಗಿದೆ.
Advertisement