
ಪಿಲಿಭಿತ್: ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಬಜರಂಗದಳದ ಇಬ್ಬರು ಸ್ಥಳೀಯ ಮುಖಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲಿಖಿತ ದೂರಿನ ಆಧಾರದ ಮೇಲೆ, BNSನ ಸೆಕ್ಷನ್ 299ರ ಅಡಿಯಲ್ಲಿ ಮಾಧೋಟಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪುರನ್‌ಪುರ ಪೊಲೀಸ್ ಅಧಿಕಾರಿ ವಿಶಾಲ್ ಚೌಧರಿ ತಿಳಿಸಿದ್ದಾರೆ.
ಬಜರಂಗದಳದ ಮುಖಂಡರಾದ ಸಂಜಯ್ ಮಿಶ್ರಾ ಮತ್ತು ವಿವೇಕ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾಧೋತ್ತಂಡ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಅಚಲ್ ಕುಮಾರ್ ಮಾತನಾಡಿ, ಅ.13ರಂದು ಮಧ್ಯಾಹ್ನ ವಾರ್ಡ್ ನಂಬರ್ ಮೂರರಲ್ಲಿ ಬಜರಂಗದಳ ಕಾರ್ಯಕರ್ತರು ಸಭೆ ಆಯೋಜಿಸಿದ್ದು ಈ ವೇಳೆ ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ್ದಾರೆ ಎಂದು ಮಾಧೋಟಂಡ ಪಟ್ಟಣದ ನಿವಾಸಿ ಅಫ್ಜಲ್ ಖಾನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ವಿರೋಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜನರನ್ನು ಸಮಾಧಾನಪಡಿಸಿದರು.
ಬಜರಂಗದಳದ ಕಾರ್ಯಕ್ರಮದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಉದ್ರೇಕಕಾರಿ ಭಾಷಣ ಮತ್ತು ಪ್ರವಾದಿ ವಿರುದ್ಧ ಅಸಭ್ಯ ಟೀಕೆಗಳನ್ನು ಮಾಡುವ ಮೂಲಕ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸಿದರು ಎಂದು ಮುಸ್ಲಿಂ ಸಮುದಾಯ ಆರೋಪಿಸಿತ್ತು. ನಂತರ ದೂರಿನ ಮೇರೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಜನರನ್ನು ಸಮಾಧಾನಪಡಿಸಿದರು.
ವೈರಲ್ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.
Advertisement