
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಮಹಾರಾಷ್ಟ್ರದ ಪನ್ವೇಲ್ ನಲ್ಲಿರುವ ಅವರ ತೋಟದ ಬಳಿ ಕೊಲೆ ಮಾಡಲು ವ್ಯಕ್ತಿಯೊಬ್ಬನಿಗೆ ರೂ. 25 ಲಕ್ಷ ಸುಪಾರಿ ನೀಡಲಾಗಿತ್ತು ಎಂದು ನವಿ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.
ಆರೋಪ ಪಟ್ಟಿಯಲ್ಲಿ ಒಟ್ಟು ಐವರನ್ನು ಹೆಸರಿಸಲಾಗಿದ್ದು, ಸದ್ಯ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈ ಸುಫಾರಿ ನೀಡಿತ್ತು. ಅಲ್ಲದೇ ಪಾಕಿಸ್ತಾನದಿಂದ ಎ.ಕೆ. 47, ಎಕೆ 92 ಮತ್ತು ಎಂ 16 ಬಂದೂಕುಗಳನ್ನು ಹಾಗೂ ಟರ್ಕಿಯ ಝಿಂಗಾನಾ ಪಿಸ್ತೂಲ್ ಖರೀದಿಸಲು ಸಿದ್ಧತೆ ನಡೆಸಿದ್ದರು. ಇದೇ ಮಾದರಿಯ ಪಿಸ್ತೂಲ್ ನಲ್ಲಿ ಪಂಜಾಬ್ ನ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಲಾಗಿತ್ತು.
ಸಲ್ಮಾನ್ ಖಾನ್ ಹತ್ಯೆಗಾಗಿ 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಬಾಲಕರನ್ನು ಆರೋಪಿಗಳು ಸಜ್ಜುಗೊಳಿಸಿದ್ದರು. ಇವರೆಲ್ಲರೂ ಪುಣೆ, ರಾಯಗಡ, ನವಿ ಮುಂಬೈ, ಥಾಣೆ ಹಾಗೂ ಗುಜರಾತ್ ನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಲ್ಮಾನ್ ಖಾನ್ ಅವರ ಚಲನವಲನದಮೇಲೆ ನಿಗಾ ಇಡಲು ಸುಮಾರು 60 ರಿಂದ 70 ಮಂದಿಯನ್ನು ಈ ತಂಡ ನಿಯೋಜಿಸಿತ್ತು. ಬಾಂದ್ರಾದಲ್ಲಿರುವ ಮನೆ, ಪನ್ವೇಲ್ ನಲ್ಲಿರುವ ತೋಟ ಹಾಗೂ ಗೋರೆಗಾಂವ್ ನಲ್ಲಿರುವ ಫಿಲ್ಮ್ ಸಿಟಿಯಲ್ಲಿ ಈ ತಂಡದ ಸದಸ್ಯರು ನಿಗಾ ಇರಿಸಿದ್ದರು. ಸಲ್ಮಾನ್ ಹತ್ಯೆಗೆ ಈ ತಂಡ 2023ರ ಆಗಸ್ಟ್ ಹಾಗೂ 2024ರ ಏಪ್ರಿಲ್ ನಲ್ಲಿ ಪ್ರಯತ್ನ ನಡೆಸಿತ್ತು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಹರಿಯಾಣದ ಪಾಣಿಪತ್ ಬಳಿ ಬಂಧಿಸಲಾದ ಸುಕ್ಬಾ ಎಂಬಾತನಿಂದ ಮಾಹಿತಿ ಲಭ್ಯವಾಗಿದ್ದು, ಶೂಟರ್ ಅಜಯ್ ಕಶ್ಯಪ್ ಹಾಗೂ ಇತರ ನಾಲ್ವರು ಈ ಯೋಜನೆಯಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಗೆ ಇರುವ ಬಿಗಿ ಭದ್ರತೆ ಹಾಗೂ ಬುಲೆಟ್ ಪ್ರೂಫ್ ಕಾರನ್ನು ಭೇದಿಸಿ ಹತ್ಯೆಗೈಯಲು ತಂಡ ಯೋಜನೆ ರೂಪಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಸುಕ್ಖಾ ಪಾಕಿಸ್ತಾನ ಮೂಲದ ಶಸಾಸ್ತ್ರ ವ್ಯಾಪಾರಿ ಡೋಗರ್ ನನ್ನು ವೀಡಿಯೊ ಕರೆ ಮೂಲಕ ಸಂಪರ್ಕಿಸಿದ್ದ. ಶಸಾಸ್ತ್ರ ಖರೀದಿಗೂ ಮುನ್ನ ಅರ್ಧದಷ್ಟು ಹಣ ನೀಡುವುದು, ಪೂರೈಕೆ ನಂತರ ಉಳಿದ ಮೊತ್ತ ಕೊಡುವ ಡೀಲ್ ನಡೆದಿತ್ತು. ಕೆನಡಾದಲ್ಲಿರುವ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಆದೇಶವನ್ನು ಇವರು ಕಾಯುತ್ತಿದ್ದರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 58 ವರ್ಷದ ನಟನನ್ನು ಹತ್ಯೆಗೈದು ಕನ್ಯಾಕುಮಾರಿಯಲ್ಲಿ ಸೇರಲು, ತದನಂತರ ಶ್ರೀಲಂಕಾಗೆ ದೋಣಿ ಮೂಲಕ ತಲುಪಬೇಕೆಂಬುದು ತಂಡದ ಯೋಜನೆಯಾಗಿತ್ತು ಎಂಬುದನ್ನು ಆರೋಪಪಟ್ಟಿ ವಿವರಿಸುತ್ತದೆ.
ಈ ಮಧ್ಯೆ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ನಂತರ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಾಜಿ ಶಾಸಕ ಮತ್ತು ಎನ್ ಸಿಪಿ ಅಜಿತ್ ಪವಾರ್ ಬಣದ ನಾಯಕನನ್ನು ಬಾಂದ್ರಾದ ನಿರ್ಮಲ್ ನಗರದ ಬಳಿ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.
Advertisement