
ನವದೆಹಲಿ: ಇಂಡಿಗೋ ಮತ್ತು ಆಕಾಶ ಏರ್‌ನಿಂದ ನಿರ್ವಹಿಸಲ್ಪಡುವ ವಿಮಾನಗಳು ಸೇರಿದಂತೆ ಕನಿಷ್ಠ 12 ವಿಮಾನಗಳಿಗೆ ಇಂದು ಭಾನುವಾರ ಸೋಷಿಯಲ್ ಮೀಡಿಯಾ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ಅನೇಕ ವಿಮಾನ ನಿಲ್ದಾಣಗಳಲ್ಲಿ ತುರ್ತು ಭದ್ರತಾ ತಪಾಸಣೆಯನ್ನು ಮಾಡಲಾಗಿದೆ.
ಇಂಡಿಗೋ ವಿಮಾನಗಳು ದೆಹಲಿಯಿಂದ ಇಸ್ತಾಂಬುಲ್, ಮುಂಬೈನಿಂದ ಇಸ್ತಾಂಬುಲ್, ಜೆಡ್ಡಾದಿಂದ ಮುಂಬೈ, ಕೋಝಿಕೋಡ್‌ನಿಂದ ದಮಾಮ್, ಪುಣೆಯಿಂದ ಜೋಧ್‌ಪುರ ಮತ್ತು ಗೋವಾದಿಂದ ಅಹಮದಾಬಾದ್ ಮಾರ್ಗಗಳನ್ನು ಒಳಗೊಂಡಿವೆ. ಈ ಘಟನೆ ನಂತರ ಸತತ ಏಳನೇ ದಿನ ಬಾಂಬ್ ಬೆದರಿಕೆಗಳು ವಿಮಾನಯಾನ ಸಂಸ್ಥೆಗಳಿಗೆ ಬಂದಿವೆ, ಇದರಿಂದ ವಿಮಾನ ಹಾರಾಟಕ್ಕೆ ವ್ಯತ್ಯಯವಾಗುತ್ತಿದ್ದು ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.
ಆಕಾಶ ಏರ್ ಲೈನ್ಸ್ ಕೂಡ ಅಡೆತಡೆಗಳನ್ನು ಎದುರಿಸಿತು, ಹಲವಾರು ವಿಮಾನಗಳು ಇದೇ ರೀತಿಯ ಬೆದರಿಕೆಗಳನ್ನು ಸ್ವೀಕರಿಸಿದವು. ಇಂದು ನಮ್ಮ ಕೆಲವು ವಿಮಾನಗಳು ಬಾಂಬ್ ಬೆದರಿಕೆ ಎದುರಿಸಿದವು. ಆಕಾಶ ಏರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಭದ್ರತೆ ಮತ್ತು ನಿಯಂತ್ರಣ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.
ಅಹಮದಾಬಾದ್‌ನಿಂದ ಮುಂಬೈ, ದೆಹಲಿಯಿಂದ ಗೋವಾ, ಮುಂಬೈನಿಂದ ಬಾಗ್ಡೋಗ್ರಾ, ದೆಹಲಿಯಿಂದ ಹೈದರಾಬಾದ್, ಕೊಚ್ಚಿಯಿಂದ ಮುಂಬೈ ಮತ್ತು ಲಕ್ನೋದಿಂದ ಮುಂಬೈನಂತಹ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಆಕಾಶ ಏರ್ ವಿಮಾನಗಳು ಭದ್ರತಾ ಎಚ್ಚರಿಕೆಗಳಿಗೆ ಒಳಪಟ್ಟಿವೆ.
ನಿನ್ನೆ ಅಂತಾರಾಷ್ಟ್ರೀಯ ಮಾರ್ಗ ವಿಮಾನಗಳು ಸೇರಿದಂತೆ 30ಕ್ಕೂ ಹೆಚ್ಚು ವಿಮಾನಗಳು ಬಾಂಬ್ ಬೆದರಿಕೆಯ ನಂತರ ತುರ್ತು ಲ್ಯಾಂಡಿಂಗ್ ಮಾಡಿದ್ದು, ನಂತರ ಅದನ್ನು ಸುಳ್ಳು ಬೆದರಿಕೆ ಎಂದು ನಿರ್ಧರಿಸಲಾಯಿತು. ಬಾಧಿತ ವಿಮಾನಯಾನ ಸಂಸ್ಥೆಗಳಲ್ಲಿ ಏರ್ ಇಂಡಿಯಾ, ವಿಸ್ತಾರಾ, ಇಂಡಿಗೋ, ಸ್ಪೈಸ್‌ಜೆಟ್, ಅಲಯನ್ಸ್ ಏರ್ ಮತ್ತು ಆಕಾಶ ಏರ್ ಸೇರಿವೆ.
ಕಳೆದ ಸೋಮವಾರದಿಂದ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ 80 ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳು ಬಂದಿವೆ.
Advertisement