
ಗುವಾಹಟಿ: ಅಸ್ಸಾಂನಲ್ಲಿ ನಡೆದ ಸಿಎಎ ವಿರೋಧಿ ಹೋರಾಟ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ ಅಸ್ಸಾಂ ಶಾಸಕ ಅಖಿಲ್ ಗೋಗೊಯಿ ಮತ್ತು ಅವರ ಮೂವರು ಸಹಚರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ( UAPA ) ಮತ್ತು ಐಪಿಸಿಯ ಸೆಕ್ಷನ್‌ಗಳ ಅಡಿಯಲ್ಲಿ NIA ವಿಶೇಷ ನ್ಯಾಯಾಲಯ ಮಂಗಳವಾರ ಆರೋಪ ಹೊರಿಸಿದೆ.
NIA ವಿಶೇಷ ನ್ಯಾಯಾಧೀಶ ಎಸ್ ಕೆ ಶರ್ಮಾ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 18 (ಪಿತೂರಿ) ಅಥವಾ UAPA ಮತ್ತು IPC ಸೆಕ್ಷನ್‌ಗಳು 120B (ಅಪರಾಧದ ಪಿತೂರಿ), 153A ( ದ್ವೇಷದ ಪ್ರಚಾರ) ಮತ್ತು 153B ಅಡಿಯಲ್ಲಿ ಗೊಗೋಯ್ ವಿರುದ್ಧ ಆರೋಪ ಪಟ್ಟಿ ಮಾಡಿರುವುದಾಗಿ ಅವರ ಪರ ವಕೀಲ ಸಾಂತನು ಬೋರ್ತಕೂರ್ ಹೇಳಿದರು. ಮತ್ತೊಂದೆಡೆ, ಧೈಜ್ಯಾ ಕೊನ್ವರ್, ಬಿಟ್ಟು ಸೋನೊವಾಲ್ ಮತ್ತು ಮನಶ್ ಕೊನ್ವರ್ ವಿರುದ್ಧ ಯುಎಪಿಎ ಸೆಕ್ಷನ್ 18 ಮತ್ತು ಐಪಿಸಿಯ 120 ಬಿ ಅಡಿಯಲ್ಲಿ ಆರೋಪ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ತನಿಖಾ ಸಂಸ್ಥೆಯ ಚಾರ್ಚ್ ಶೀಟ್ ನಲ್ಲಿ ಸೂಚಿಸಿರುವಂತೆ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿದ ಅಪರಾಧಕ್ಕೆ ಸಂಬಂಧಿಸಿದ UAPA ಸೆಕ್ಷನ್ 39 ಮತ್ತು IPC ಸೆಕ್ಷನ್ 124A (ದೇಶದ್ರೋಹ) ಅಪರಾಧವನ್ನು ನ್ಯಾಯಾಲಯ ತಿರಸ್ಕರಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಗೊಗೋಯ್, ನಾವು ಜನರೊಂದಿಗೆ ಇದ್ದೇವೆ ಎಂಬುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಈ ಸರ್ಕಾರ ನಮ್ಮನ್ನು ಜೈಲಿನೊಳಗೆ ಇರಿಸಲು ಬಯಸುತ್ತದೆ. ಫ್ಯಾಸಿಸ್ಟ್ ಮತ್ತು ಕೋಮುವಾದಿ ಸರ್ಕಾರದ ವಿರುದ್ಧದ ಹೋರಾಟವು ತುಂಬಾ ತೊಂದರೆದಾಯಕ ಮತ್ತು ದುಬಾರಿ ವ್ಯವಹಾರವಾಗಿದೆ ಎಂದರು.
ತಮ್ಮ ವಿರುದ್ಧದ ಆರೋಪಗಳ ವಿರುದ್ಧ ನಾಲ್ವರು ಗುವಾಹಟಿ ಹೈಕೋರ್ಟ್‌ಗೆ ಮೊರೆ ಹೋಗುವುದಾಗಿ ಅವರು ತಿಳಿಸಿದರು. ಡಿಸೆಂಬರ್ 2019 ರಲ್ಲಿ ರಾಜ್ಯದಲ್ಲಿ ನಡೆದ ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿನ ಪಾತ್ರಕ್ಕಾಗಿ ಗೊಗೋಯ್ ಮತ್ತು ಅವರ ಮೂವರು ಸಹಚರರ ವಿರುದ್ಧ ಎರಡು ಪ್ರಕರಣಗಳನ್ನು ತನಿಖೆಯನ್ನು ಎನ್ ಐಎ ನಡೆಸಿದೆ.
Advertisement