
ನವದೆಹಲಿ: ಇತ್ತೀಚಿಗೆ ನಿತ್ಯ ನೂರಾರು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಮತ್ತು ಕರೆಗಳು ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಬೆದರಿಕೆ ಹಾಕುತ್ತಿರುವವರನ್ನು ಪತ್ತೆ ಹಚ್ಚಲು ಪ್ರಾರಂಭಿಸಿದೆ ಮತ್ತು ಅಂತಹ ಸಂದೇಶಗಳ ಡೇಟಾವನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ಮೆಟಾ ಮತ್ತು ಎಕ್ಸ್‌ನಂತಹ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಇಂತಹ ಹುಸಿ ಬಾಂಬ್ ಬೆದರಿಕೆಗಳ ಹಿಂದೆ ಇರುವವರನ್ನು ಗುರುತಿಸಲು ಸಹಕರಿಸುವಂತೆ ಸರ್ಕಾರವು ಉನ್ನತ ಬಹುರಾಷ್ಟ್ರೀಯ ತಂತ್ರಜ್ಞಾನ ಸಮೂಹಗಳನ್ನು ಸೂಚಿಸಿದೆ.
ಸಾಮಾಜಿಕ ಮಾಧ್ಯಮಗಳ ಮೂಲಕ ವಿಮಾನಯಾನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿರುವ ಕೆಲವು ಜನರನ್ನು ಸರ್ಕಾರ ಪತ್ತೆ ಮಾಡಿದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ವಂಚನೆ ಕರೆಗಳು ಮತ್ತು ಸಂದೇಶಗಳು ಎಲ್ಲಿಂದ ಬಂದವು ಮತ್ತು ಅದರ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಯಾವುದೇ ಹೆಚ್ಚಿನ ವಿವರಗಳನ್ನು ಸರ್ಕಾರದ ಮೂಲಗಳು ನೀಡಿಲ್ಲ.
"ಸಾಮಾಜಿಕ ಮಾಧ್ಯಮ ಕಂಪನಿಗಳಾದ ಮೆಟಾ ಮತ್ತು ಎಕ್ಸ್‌ಗೆ ಸರ್ಕಾರವು ಹಲವಾರು ವಿಮಾನಯಾನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅವರ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡಿದ ಇಂತಹ ಹುಸಿ ಕರೆಗಳು ಮತ್ತು ಸಂದೇಶಗಳಿಗೆ ಸಂಬಂಧಿಸಿದ ಡೇಟಾವನ್ನು ಹಂಚಿಕೊಳ್ಳಲು ತಿಳಿಸಿದೆ ಮತ್ತು ಸಹಕರಿಸಲು ಸೂಚಿಸಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement