
ಪುಣೆ: ಭಾರತೀಯ ಸೇನೆ ಲಡಾಖ್ ಗಡಿಯಲ್ಲಿ "ಊಹಿಸಲಾಗದ" ಪರಿಸ್ಥಿತಿಯಲ್ಲಿ ಕೆಲಸ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಪುಣೆಯಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಭಾರತ-ಚೀನಾ ಎಲ್ ಎಸಿ ಗಸ್ತು ಒಪ್ಪಂದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್, ಭಾರತೀಯ ಸೇನೆ ಮತ್ತು ರಾಜತಾಂತ್ರಿಕತೆಯನ್ನು ಶ್ಲಾಘಿಸಿದರು. ಸಂಬಂಧಗಳ ಸಾಮಾನ್ಯೀಕರಣಕ್ಕೆ ಸಾಮಾನ್ಯವಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದು ಸ್ವಲ್ಪ ಬೇಗ ಆಗಿದೆ ಎಂದು ಹೇಳಿದರು.
ಬ್ರಿಕ್ಸ್ ಶೃಂಗಸಭೆಗಾಗಿ ರಷ್ಯಾದ ಕಜಾನ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಉಭಯ ದೇಶಗಳ ವಿದೇಶಾಂಗ ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಭೇಟಿಯಾಗಿ ಗಡಿಯಲ್ಲಿ ಹೇಗೆ ಮುಂದುವರಿಯಬೇಕು ಎಂದು ನಿರ್ಧರಿಸಿದರು ಎಂದು ಜೈಶಂಕರ್ ತಿಳಿಸಿದರು.
ದೇಶವನ್ನು ರಕ್ಷಿಸಲು ಊಹೆಗೂ ನಿಲುಕದ ಪರಿಸ್ಥಿತಿಯಲ್ಲಿ ಸೇನೆಯು ಇತ್ತು(ಎಲ್‌ಎಸಿಯಲ್ಲಿ) ಮತ್ತು ಮಿಲಿಟರಿ ತನ್ನ ಪಾತ್ರವನ್ನು ಮಾಡಿದೆ. ಅದೇ ರೀತಿ ರಾಜತಾಂತ್ರಿಕತೆಯು ತನ್ನ ಪಾತ್ರವನ್ನು ಮಾಡಿದೆ" ಎಂದು ಜೈಶಂಕರ್ ಹೇಳಿದರು.
ಸಮಸ್ಯೆಯ ಒಂದು ಭಾಗವೆಂದರೆ ಹಿಂದಿನ ವರ್ಷಗಳಲ್ಲಿ, ಗಡಿ ಮೂಲಸೌಕರ್ಯವನ್ನು ನಿಜವಾಗಿಯೂ ನಿರ್ಲಕ್ಷಿಸಲಾಗಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಭಾರತ ತನ್ನ ಮೂಲಸೌಕರ್ಯವನ್ನು ಸುಧಾರಿಸಿದೆ ಎಂದರು.
"ಇಂದು ನಾವು ಒಂದು ದಶಕದ ಹಿಂದೆ ಇದ್ದಕ್ಕಿಂತ ವಾರ್ಷಿಕವಾಗಿ ಐದು ಪಟ್ಟು ಹೆಚ್ಚು ಸಂಪನ್ಮೂಲಗಳನ್ನು ಸೃಷ್ಟಿಸಿದ್ದೇವೆ. ಅದರ ಫಲಿತಾಂಶ ಈಗ ತೋರಿಸುತ್ತಿದೆ ಮತ್ತು ಮಿಲಿಟರಿಯನ್ನು ಪರಿಣಾಮಕಾರಿಯಾಗಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ" ಎಂದು ಅವರು ಹೇಳಿದರು.
Advertisement