
ನವದೆಹಲಿ: ಅಕ್ಟೋಬರ್ 29 ರೊಳಗೆ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳ ಹಿಂಪಡೆಯುವಿಕೆ ಪ್ರಕ್ರಿಯೆ ಪೂರ್ಣಗೊಳಿಸಲಿದ್ದು, ಅಕ್ಟೋಬರ್ 30 ರಿಂದ ಗಸ್ತು ಪುನರಾರಂಭಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ಎರಡು ಪ್ರದೇಶಗಳಿಗೆ ಭಾರತ ಮತ್ತು ಚೀನಾ ಕಳೆದ ವಾರ ಗಸ್ತು ಒಪ್ಪಂದವನ್ನು ಮಾಡಿಕೊಂಡಿದ್ದವು. ಈಗಾಗಲೇ ಸೇನಾ ವಾಪಸಾತಿ ನಡೆದಿರುವ ಪ್ರದೇಶಗಳಲ್ಲಿ ಗಸ್ತು ಮಿತಿಗಳು ಮತ್ತು ಬಫರ್ ವಲಯಗಳು ಈ ಒಪ್ಪಂದದ ವ್ಯಾಪ್ತಿಯೊಳಗೆ ಬರುವುದಿಲ್ಲ.
ಪೂರ್ವ ಲಡಾಕ್ ಗಡಿ ಬಿಕ್ಕಟ್ಟು ಶಮನಗೊಳಿಸಲು ಎರಡೂ ದೇಶಗಳು ಒಪ್ಪಂದಕ್ಕೆ ಬಂದ ಬೆನ್ನಲ್ಲೇ ಉಭಯ ದೇಶಗಳಿಂದ ಸೇನಾ ವಾಪಸಾತಿ ಪ್ರಕ್ರಿಯೆ ಶುರುವಾಗಿದೆ. ಸೇನಾ ಪರಿಕರಗಳನ್ನು ಹಿಂಪಡೆಯಲು ಎರಡೂ ಕಡೆಯ ಸೇನೆಗಳು ಚಾಲನೆ ನೀಡಿವೆ ಎಂದು ಮೂಲಗಳು ತಿಳಿಸಿವೆ.
"ಟೆಂಟ್‌ಗಳನ್ನು ಮತ್ತು ತಾತ್ಕಾಲಿಕ ಶಿಬಿರಗಳನ್ನು ಹಿಂಪಡೆಯಲಾಗುತ್ತಿದೆ. ವಾಹನಗಳನ್ನು ಸಹ ಬ್ಯಾಚ್‌ಗಳಲ್ಲಿ ಹಿಂತಿರುಗಿಸಲಾಗುತ್ತಿದೆ" ಎಂದು ಸೇನಾ ಮೂಲಗಳು ತಿಳಿಸಿವೆ.
ಕಾರ್ಪ್ಸ್ ಕಮಾಂಡರ್‌ಗಳ ನಡುವಿನ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಯಿತು ಮತ್ತು ಶಿಬಿರಗಳನ್ನು ಹಿಂಪಡೆಯುವ ಕಾರ್ಯ ಬುಧವಾರ ಪ್ರಾರಂಭವಾಯಿತು. ಅಕ್ಟೋಬರ್ 29 ರೊಳಗೆ ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಕ್ಟೋಬರ್ 30 ರಿಂದ ಗಸ್ತು ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೇನಾ ಪಡೆಗಳು 2020ರ ಜೂನ್‌ನಲ್ಲಿ ಸಂಘರ್ಷಕ್ಕೆ ಇಳಿದಿದ್ದರಿಂದ ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ನಾಲ್ಕು ವರ್ಷಗಳಿಂದಲೂ ಪರಿಸ್ಥಿತಿ ಬಿಗುವಿನಿಂದಲೇ ಕೂಡಿತ್ತು. ಆದರೆ ರಾಜತಾಂತ್ರಿಕ ಹಾಗೂ ಸೇನಾ ಮಟ್ಟದಲ್ಲಿ ನಿರಂತರ ಮಾತುಕತೆ ಬಳಿಕ ಕಳೆದ ಸೋಮವಾರ ಎರಡೂ ದೇಶಗಳು ಪೂರ್ವ ಲಡಾಕ್ ಗಡಿಯಲ್ಲಿ ಗಸ್ತು ನಡೆಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದವು.
Advertisement