
ಪಾಟ್ನಾ: ಸಿವಾನ್‌ನ ಮಾಜಿ ಸಂಸದ, ದಿ. ಮೊಹಮ್ಮದ್ ಶಹಾಬುದ್ದೀನ್ ಅವರ ಪತ್ನಿ ಹೆನಾ ಶಹಾಬ್ ಮತ್ತು ಪುತ್ರ ಒಸಾಮಾ ಅವರು ಭಾನುವಾರ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಜನತಾ ದಳಕ್ಕೆ(ಆರ್‌ಜೆಡಿ) ಸೇರಿದರು.
ತಾಯಿ-ಮಗ ಇಬ್ಬರೂ ಲಾಲು, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ತೇಜಸ್ವಿ ಅವರನ್ನು ಶನಿವಾರ ತಡರಾತ್ರಿ ಪಾಟ್ನಾದ ಅವರ 10 ಸರ್ಕ್ಯುಲರ್ ರಸ್ತೆಯ ನಿವಾಸದಲ್ಲಿ ಭೇಟಿ ಮಾಡಿದ್ದರು.
2024 ರ ಲೋಕಸಭಾ ಚುನಾವಣೆಯಲ್ಲಿ ಹೆನಾ ಶಹಾಬ್ ಅವರು ಸಿವಾನ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಹೆನಾ ಅವರು ಜನತಾ ದಳ(ಯುನೈಟೆಡ್)ದ ಅಭ್ಯರ್ಥಿ ವಿಜಯಲಕ್ಷ್ಮಿ ದೇವಿ ಅವರ ವಿರುದ್ಧ 92,000 ಮತಗಳಿಂದ ಸೋಲು ಅನುಭವಿಸಿದ್ದರು.
ಆರ್‌ಜೆಡಿ ಅಭ್ಯರ್ಥಿ ಅವಧ್ ಬಿಹಾರಿ ಚೌಧರಿ ಮೂರನೇ ಸ್ಥಾನ ಪಡೆದಿದ್ದರು. ಲೋಕಸಭೆ ಚುನಾವಣೆಯಲ್ಲಿ ಹೆನಾ ಸ್ಪರ್ಧೆ ಆರ್‌ಜೆಡಿ ಅಭ್ಯರ್ಥಿ ಚೌಧರಿ ಸೋಲಿಗೆ ಕಾರಣವಾಗಿತ್ತು.
ಸಿವಾನ್‌ನಲ್ಲಿ ಸಾಹೇಬ್ ಎಂದು ಜನಪ್ರಿಯವಾಗಿರುವ ಮೊಹಮ್ಮದ್ ಶಹಾಬುದ್ದೀನ್ ಈ ಪ್ರದೇಶದ ಮುಸ್ಲಿಂ ಸಮುದಾಯದ ಪ್ರಬಲ ನಾಯಕರಾಗಿದ್ದರು. ಶಹಾಬುದ್ದೀನ್ ಸಾವಿನ ನಂತರ ಹೇನಾ ಮತ್ತು ಲಾಲು ಕುಟುಂಬದ ಸಂಬಂಧ ಹಳಸಿತ್ತು.
1996 ರಿಂದ 2004 ರವರೆಗೆ ಸಿವಾನ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮೊಹಮ್ಮದ್ ಶಹಾಬುದ್ದೀನ್ ಅವರು ಜೋಡಿ ಕೊಲೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಸೆಂಟ್ರಲ್ ಜೈಲು ಸೇರಿದ್ದರು. 2021 ರಲ್ಲಿ ಜೈಲಿನಲ್ಲಿಯೇ ಕೋವಿಡ್ 19 ಸೋಂಕಿನಿಂದ ನಿಧನರಾಗಿದ್ದರು.
Advertisement