
ನವದೆಹಲಿ: ದೇಶದ ಉಕ್ಕಿನ ಮನುಷ್ಯ ಎಂದೇ ಹೆಸರಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್, ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿದ ಮತ್ತು ಸಂವಿಧಾನವನ್ನು ಟೀಕಿಸಿದ 'ಸೈದ್ಧಾಂತಿಕ ಗುರುಗಳು' ಅವರ ಪರಂಪರೆಯನ್ನು ದುರುಪಯೋಗಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದೆ.
ಸ್ವತಂತ್ರ ಭಾರತವನ್ನು ಸಂಪೂರ್ಣ ದೇಶವನ್ನಾಗಿ ಮಾಡಿದ ಭಾರತದ ಉಕ್ಕಿನ ಮನುಷ್ಯ, ದೇಶದ ಮೊದಲ ಉಪ ಪ್ರಧಾನಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ನಮ್ಮ ಆರಾಧ್ಯ ದೈವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದ್ದಾರೆ.
ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ವ್ಯಕ್ತಿತ್ವ ಮತ್ತು ಆಲೋಚನೆಗಳು ಮುಂದಿನ ಪೀಳಿಗೆಗೆ ರಾಷ್ಟ್ರದ ಸೇವೆ ಮಾಡಲು ಯಾವಾಗಲೂ ಪ್ರೇರೇಪಿಸುತ್ತವೆ ಎಂದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಟೇಲ್ ಅವರು ದೇಶವನ್ನು ಏಕತೆ ಮತ್ತು ಸಮಗ್ರತೆಯ ಎಳೆಯಲ್ಲಿ ಒಟ್ಟಿಗೆ ಕಟ್ಟಿದ ನಾಯಕ ಎಂದು ಸ್ಮರಿಸಿದರು.
'ಭಾರತವನ್ನು ಒಂದುಗೂಡಿಸಿದ ಮತ್ತು ದೇಶದ ಜನರಲ್ಲಿ ಪ್ರೀತಿ ಮತ್ತು ಭ್ರಾತೃತ್ವವನ್ನು ಸ್ಥಾಪಿಸಿದ ಅವರ ಹೆಜ್ಜೆಗುರುತುಗಳು ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತವೆ ಎಂದು ಬರೆದಿದ್ದಾರೆ.
Advertisement