ಪಾಟ್ನ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ ಕೆ.ಸಿ.ತ್ಯಾಗಿ ಅವರು ಜೆಡಿಯು ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೆ.ಸಿ.ತ್ಯಾಗಿ ರಾಜೀನಾಮೆ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಾಜೀವ್ ರಂಜನ್ ಪ್ರಸಾದ್ ಅವರನ್ನು ನಿತೀಶ್ ಕುಮಾರ್ ಅವರು ನೇಮಿಸಿದ್ದಾರೆ.
ಈ ನಡುವೆ ವೈಯಕ್ತಿಕ ಕಾರಣಗಳಿಗಾಗಿ ತ್ಯಾಗಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಪಕ್ಷ ಹೇಳಿದೆ. ಆದರೆ. ಜೆಪಿ ನಾಯಕತ್ವಕ್ಕೆ ಹೊಂದಿಕೆಯಾಗದ ರೀತಿಯಲ್ಲಿ ಪ್ರಮುಖ ವಿಷಯಗಳ ಕುರಿತು ತ್ಯಾಗಿ ಅವರು ಹೇಳಿಕೆ ನೀಡಿದ್ದು, ಇದರಿಂದ ಪಕ್ಷಕ್ಕೆ ಇರಿಸುಮುರಿಸಾಗುತ್ತಿದೆ ಎನ್ನಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ನಾನು ಟಿವಿ ಚರ್ಚೆಗಳಿಂದ ದೂರವಿರುವುದನ್ನು ನೀವು ಗಮನಿಸಿರಬೇಕು. ಬೇರೆ ಕೆಲಸಗಳಿಂದಾಗಿ ವಕ್ತಾರ ಹುದ್ದೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಿ. ನಿಮ್ಮ ಮತ್ತು ಬಿಹಾರ ಸರ್ಕಾರದ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ನಾನು ಲಭ್ಯವಿರುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತ್ಯಾಗಿ ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯ ನಂತರ ಮೂರನೇ ಅವಧಿಗೆ ಮೋದಿ ಸರ್ಕಾರವನ್ನು ಬೆಂಬಲಿಸಿದ ಪ್ರಮುಖ ಮಿತ್ರಪಕ್ಷಗಳಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಕೂಡ ಸೇರಿದೆ.
Advertisement