ಇಂಫಾಲ್: ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಭಾನುವಾರ ಶಂಕಿತ ಉಗ್ರರು ನಡೆಸಿದ ಬಂದೂಕು ಮತ್ತು ಬಾಂಬ್ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಉಗ್ರರು ಬೆಟ್ಟದ ತಪ್ಪಲಿನಿಂದ ತಗ್ಗು ಪ್ರದೇಶಗಳಾದ ಕೌಟ್ರುಕ್ ಮತ್ತು ನೆರೆಯ ಕಡಂಗ್‌ಬಂಡ್‌ನ ಪ್ರದೇಶಗಳ ಕಡೆಗೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಎಂಟು ವರ್ಷದ ಮಗಳು ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಇದಕ್ಕಿದ್ದಂತೆ ಗ್ರಾಮದ ಮೇಲಿನ ದಾಳಿಯು ವ್ಯಾಪಕ ಭೀತಿಯನ್ನುಂಟು ಮಾಡಿದ್ದು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಅನೇಕ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ದೌಡಾಯಿಸಿದ್ದಾರೆ.
ಮೃತ ಮಹಿಳೆಯ ಮೃತದೇಹವನ್ನು 31 ವರ್ಷದ ನಂಗ್‌ಬಾಮ್ ಸುರ್ಬಾಲಾ ದೇವಿ ಎಂದು ಗುರುತಿಸಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರವಾನಿಸಲಾಗಿದೆ. ದೇವಿ ಅವರ ಪುತ್ರಿ ಮತ್ತು ಪೊಲೀಸ್ ಅಧಿಕಾರಿ ಎನ್. ರಾಬರ್ಟ್ (30) ಅವರನ್ನು ರಿಮ್ಸ್‌ಗೆ ದಾಖಲಿಸಲಾಗಿದ್ದು, ಇನ್ನಿಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ಆರಂಭವಾದಾಗ ಸಂತ್ರಸ್ತರು ಅವರ ಮನೆಗಳಲ್ಲಿಯೇ ಇದ್ದರು. ಪರಿಸ್ಥಿತಿಯನ್ನು ಸ್ಥಿರಗೊಳಿಸಲು ರಾಜ್ಯ ಮತ್ತು ಕೇಂದ್ರ ಘಟಕಗಳು ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement